Hardik Pandya: ಪಾಂಡ್ಯ 71; ಭಾರತ 474ಕ್ಕೆ ಆಲೌಟ್
ಬೆಂಗಳೂರು: ಪ್ರವಾಸಿ ಅಫಘಾನಿಸ್ತಾನ ವಿರುದ್ಧ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾಗುತ್ತಿರುವ ಐತಿಹಾಸಿಕ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಹಾರ್ದಿಕ್ ಪಾಂಡ್ಯ ಗಳಿಸಿರುವ ಅರ್ಧಶತಕದ (71) ನೆರವಿನೊಂದಿಗೆ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 104.5 ಓವರ್‌ಗಳಲ್ಲಿ 474 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿದೆ.
347/6 ಎಂಬಲ್ಲಿದ್ದ ದಿನದಾಟ ಮುಂದುವಸಿದ್ದ ಭಾರತ ತಂಡಕ್ಕೆ ರವಿಚಂದ್ರನ್ ಅಶ್ವಿನ್ (18) ವಿಕೆಟ್ ಬೇಗನೇ ನಷ್ಟವಾದರೂ ಪಾಂಡ್ಯ ಬಿರುಸಿನ ಆಟವಾಡುವ ಮೂಲಕ ಗಮನ ಸೆಳೆದರು.
ಆಘ್ಘಾನ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಪಾಂಡ್ಯ ಆಕರ್ಷಕ ಅರ್ಧಶತಕ ಸಾಧನೆ ಮಾಡಿದರು. ಇವರಿಗೆ ರವೀಂದ್ರ ಜಡೇಜಾ (20) ಅವರಿಂದ ಉತ್ತಮ ಬೆಂಬಲ ದೊರಕಿತು. ಆದರೆ ಅರ್ಧಶತಕದ ಬೆನ್ನಲ್ಲೇ ಬಿರುಸಿನ ಆಟಕ್ಕಿಳಿದ ಪಾಂಡ್ಯ ವಿಕೆಟ್ ಒಪ್ಪಿಸಿದರು.
94 ಎಸೆತಗಳನ್ನು ಎದುರಿಸಿದ ಪಾಂಡ್ಯ 10 ಬೌಂಡರಿಗಳಿಂದ 71 ರನ್ ಗಳಿಸಿದರು. ಇನ್ನುಳಿದಂತೆ ಉಮೇಶ್ ಯಾದವ್ (26*) ಹಾಗೂ ಇಶಾಂತ್ ಶರ್ಮಾ (8) ರನ್ ಗಳಿಸಿದರು. ಇವರಿಬ್ಬರು ಕೊನೆಯ ವಿಕೆಟ್‌ಗೆ 34 ರನ್ ಸೇರಿಸಿದರು.
ಆಘ್ಘಾನ್ ಪರ ಯಮಿನ್ ಅಹ್ಮದ್‌ಜಾಯ್(51ಕ್ಕೆ 3) ಹಾಗೂ ವಫಾದಾರ್(100ಕ್ಕೆ 2) ಪರಿಣಾಮಕಾರಿ ದಾಳಿ ಸಂಘಟಿಸಿದರು. ಇನ್ನುಳಿದಂತೆ ಸ್ಪಿನ್ನರ್‌ಗಳಾದ ರಾಶೀದ್ ಖಾನ್ (154ಕ್ಕೆ 2), ಮುಜೀಬ್ ಉರ್ ರೆಹ್ಮಾನ್ (75ಕ್ಕೆ 1) ಹಾಗೂ ಮೊಹಮ್ಮದ್ ನಬಿ (65ಕ್ಕೆ 1) ಮಿಂಚುವಲ್ಲಿ ವಿಫಲವಾದರು.
ಈ ಮೊದಲು ಮಳೆ ಬಾಧಿತ ಮೊದಲ ದಿನದ ಆಟದಲ್ಲಿ ಶಿಖರ್ ಧವನ್ (107) ಹಾಗೂ ಮುರಳಿ ವಿಜಯ್ (105) ಬಾರಿಸಿದ ಆಕರ್ಷಕದ ಶತಕದ ನೆರವಿನಿಂದ ಟೀಮ್ ಇಂಡಿಯಾ ಆರು ವಿಕೆಟ್ ನಷ್ಟಕ್ಕೆ 347 ರನ್ ಪೇರಿಸುವಂತಾಗಿತ್ತು. ಆದರೆ ಕೊನೆಯ ಹಂತದಲ್ಲಿ ತಿರುಗಿಬಿದ್ದಿದ್ದ ಆಘ್ಘಾನ್ ಬೌಲರ್‌ಗಳು ಭಾರತದ ಹೋರಾಟಕ್ಕೆ ಕಡಿವಾಣ ಹಾಕಿದ್ದರು.