EBM News Kannada
Leading News Portal in Kannada

ಚಾಂಪಿಯನ್ಸ್ ಟ್ರೋಫಿಗೆ ಭಾರತಕ್ಕಾಗಿ ಹೈಬ್ರೀಡ್ ಮಾದರಿ ತಿರಸ್ಕರಿಸಿದ ಪಿಸಿಬಿ

0


ಇಸ್ಲಾಮಾಬಾದ್ : ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಫೆಬ್ರವರಿ 19ರಂದು ಆರಂಭಗೊಳ್ಳಬೇಕು ಮತ್ತು ಅದು ಪಾಕಿಸ್ತಾನದಲ್ಲೇ ನಡೆಯಬೇಕು ಎಂಬ ಪ್ರಸ್ತಾವವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯು ಅಂತರ್‍ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಮುಂದಿಟ್ಟಿದೆ. ಭಾರತದ ಪಂದ್ಯಗಳಿಗೆ ಹೈಬ್ರಿಡ್ ಮಾದರಿ (ಭಾರತದ ಪಂದ್ಯಗಳನ್ನು ಬೇರೆ ದೇಶಗಳಲ್ಲಿ ಏರ್ಪಡಿಸುವುದು)ಯನ್ನು ಅಳವಡಿಸಿಕೊಳ್ಳಲು ಅದು ನಿರಾಕರಿಸಿದೆ.

ಪಿಸಿಬಿಯ ಪ್ರಸ್ತಾವದ ಪ್ರಕಾರ, ಐಸಿಸಿ ಚಾಂಪಿಯನ್ಸ್ ಟ್ರೋಫಿಯು 2025ರ ಫೆಬ್ರವರಿ 19ರಿಂದ ಮಾರ್ಚ್ 9ರವರೆಗೆ ನಡೆಯಲಿದೆ. ಎಲ್ಲಾ ಪಂದ್ಯಗಳು ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್‍ಗಳಲ್ಲಿ ನಡೆಯುತ್ತವೆ.

ಪಂದ್ಯಾವಳಿಯ ಸಿದ್ಧತೆಗಳನ್ನು ಪರಿಶೀಲಿಸಲು ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಐಸಿಸಿ ಅಧಿಕಾರಿಗಳು ಸಿದ್ಧತೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ.

ಆದರೆ, ವಿಶೇಷವಾಗಿ ಭಾರತದ ಪಂದ್ಯಗಳಿಗೆ ಹೈಬ್ರಿಡ್ ಮಾದರಿಗಳನ್ನು ಅನುಸರಿಸಲು ಪಿಸಿಬಿ ನಿರಾಕರಿಸಿದೆ. ಬದಲಿಗೆ, ಎಲ್ಲಾ ಪಂದ್ಯಗಳು ಪಾಕಿಸ್ತಾನದಲ್ಲೇ ನಡೆಯಬೇಕು ಎಂದು ಆಗ್ರಹಿಸಿದೆ.

ಆದರೆ, ಇದಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಪ್ಪುವ ಸಾಧ್ಯತೆಯಿಲ್ಲ. ಭಾರತದ ಪಂದ್ಯಗಳನ್ನು ವಿದೇಶಗಳ ತಟಸ್ಥ ಮೈದಾನಗಳಲ್ಲಿ ನಡೆಸಬೇಕು ಎಂಬ ಪ್ರಸ್ತಾವವನ್ನು ಅದು ಮುಂದಿಟ್ಟಿದೆ.

ಕಳೆದ ವರ್ಷ ಪಾಕಿಸ್ತಾನ ಆತಿಥ್ಯ ವಹಿಸಿದ್ದ ಏಶ್ಯ ಕಪ್‍ನ ಭಾರತದ ಪಂದ್ಯಗಳನ್ನು ಶ್ರೀಲಂಕಾಗೆ ವರ್ಗಾಯಿಸಲಾಗಿತ್ತು. ಆದರೆ ಈ ಬಾರಿ ಇಂಥ ಹೈಬ್ರಿಡ್ ಮಾದರಿಯನ್ನು ಅನುಸರಿಸಲು ಪಾಕಿಸ್ತಾನ ಸಿದ್ಧವಾಗಿಲ್ಲ. ಭಾರತದ ಪಂದ್ಯಗಳು ಸೇರಿದಂತೆ ಎಲ್ಲಾ ಪಂದ್ಯಗಳು ಪಾಕಿಸ್ತಾನದಲ್ಲೇ ನಡೆಯಬೇಕು ಎಂದು ಅದು ಒತ್ತಾಯಿಸಿದೆ.

“ನಾವು ಹೈಬ್ರೀಡ್ ಮಾದರಿಯನ್ನು ಅನುಸರಿಸುವುದಿಲ್ಲ. ಆದರೆ, ಭಾರತದ ಪಂದ್ಯಗಳು ಲಾಹೋರ್‍ನಲ್ಲಿ ಮಾತ್ರ ನಡೆಯಬಹುದು ಎಂಬ ವಿನಾಯಿತಿಯನ್ನು ನಾವು ನೀಡಬಹುದಾಗಿದೆ. ಈ ಮೂಲಕ ಭಾರತೀಯ ತಂಡವು ಪಾಕಿಸ್ತಾನದ ವಿವಿಧ ನಗರಗಳಿಗೆ ಸುತ್ತಾಡಬೇಕಾಗಿಲ್ಲ. ಲಾಹೋರ್‍ನಲ್ಲಿ ಅದರ ಭದ್ರತೆಯನ್ನು ಚೆನ್ನಾಗಿ ನೋಡಿಕೊಳ್ಳಬಹುದಾಗಿದೆ’’ ಎಂದು ಪಿಸಿಬಿಯ ಮೂಲವೊಂದು ತಿಳಿಸಿದೆ.

Leave A Reply

Your email address will not be published.