EBM News Kannada
Leading News Portal in Kannada

ಗ್ಲೋಬಲ್ ಟಿ20 ಲೀಗ್: ಮಾಂಟ್ರಿಯಲ್ ಟೈಗರ್ಸ್ ಚಾಂಪಿಯನ್ಸ್​ – Kannada News | Global T20 Canada 2023: Montreal Tigers Champions

0


Global T20 Canada 2023: ಗ್ಲೋಬಲ್ ಟಿ20 ಲೀಗ್​ನ ಫೈನಲ್ ಪಂದ್ಯದಲ್ಲಿ ಸರ್ರೆ ಜಾಗ್ವಾರ್ಸ್ ವಿರುದ್ಧ ಜಯ ಸಾಧಿಸಿ ಮಾಂಟ್ರಿಯಲ್ ಟೈಗರ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿದೆ

Global T20 Canada 2023: ಕೆನಡಾದಲ್ಲಿ ನಡೆದ ಗ್ಲೋಬಲ್ ಟಿ20 ಲೀಗ್​ನಲ್ಲಿ ಮಾಂಟ್ರಿಯಲ್ ಟೈಗರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸರ್ರೆ ಜಾಗ್ವಾರ್ಸ್ ವಿರುದ್ಧ 5 ವಿಕೆಟ್​ಗಳ ಜಯ ಸಾಧಿಸಿ ಮಾಂಟ್ರಿಯಲ್ ಟೈಗರ್ಸ್ ತಂಡ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಕ್ರಿಸ್ ಲಿನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸರ್ರೆ ಜಾಗ್ವಾರ್ಸ್ ತಂಡಕ್ಕೆ ಮೊಹಮ್ಮದ್ ಹ್ಯಾರಿಸ್ (23 ರನ್, 22 ಎಸೆತ) ಹಾಗೂ ಜತೀಂದರ್ ಸಿಂಗ್ (56 ರನ್, 57 ಎಸೆತ) ನಿಧಾನಗತಿಯ ಆರಂಭ ಒದಗಿಸಿದ್ದರು.

ಅದರಲ್ಲೂ ಅಜೇಯರಾಗಿ ಉಳಿದ ಜತೀಂದರ್ ಸಿಂಗ್ 57 ಎಸೆತಗಳನ್ನು ಎದುರಿಸಿದರೂ ಕಲೆಹಾಕಿದ್ದು ಕೇವಲ 56 ರನ್​ಗಳು ಮಾತ್ರವಾಗಿತ್ತು. ಪರಿಣಾಮ ನಿಗದಿತ 20 ಓವರ್​ಗಳಲ್ಲಿ ಸರ್ರೆ ಜಾಗ್ವಾರ್ಸ್ 5 ವಿಕೆಟ್​ ಕಳೆದುಕೊಂಡು 130 ರನ್​ಗಳಿಸಲಷ್ಟೇ ಶಕ್ತರಾದರು.

131 ರನ್​ಗಳ ಸುಲಭ ಗುರಿ ಪಡೆದ ಮಾಂಟ್ರಿಯಲ್ ಟೈಗರ್ಸ್ ತಂಡವು ಉತ್ತಮ ಆರಂಭ ಪಡೆರಿಲಿಲ್ಲ. ಆರಂಭಿಕ ಆಟಗಾರ ಮುಹಮ್ಮದ್ ವಾಸಿಂ ಶೂನ್ಯಕ್ಕೆ ಔಟಾದರೆ, ನಾಯಕ ಕ್ರಿಸ್ ಲಿನ್ 31 ರನ್​ಗಳಿಸಲು 35 ಎಸೆತಗಳನ್ನು ತೆಗೆದುಕೊಂಡಿದ್ದರು.
ಆದರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಶೆರ್ಫನ್ ರುದರ್​ಫೋರ್ಡ್​ 29 ಎಸೆತಗಳಲ್ಲಿ ಅಜೇಯ 38 ರನ್​ ಬಾರಿಸಿದರು. ಹಾಗೆಯೇ ಅಂತಿಮ ಹಂತದಲ್ಲಿ ಆ್ಯಂಡ್ರೆ ರಸೆಲ್ ಕೂಡ ಅಬ್ಬರಿಸಿದರು.

ಪರಿಣಾಮ ಕೊನೆಯ ಓವರ್​ನಲ್ಲಿ 12 ರನ್​ಗಳಿಸಬೇಕಿತ್ತು. ಅಂತಿಮ ಓವರ್​ನ ಎಸೆದ ಖಾಲಿದ್​ನ ಮೊದಲ ಎಸೆತದಲ್ಲಿ ರುದರ್​ಫೋರ್ಡ್​ 1 ರನ್​ ಓಡಿದರು. ಇನ್ನು 2ನೇ ಎಸೆತದಲ್ಲಿ ರಸೆಲ್ ಭರ್ಜರಿ ಸಿಕ್ಸ್ ಸಿಡಿಸಿದರು. 3ನೇ ಎಸೆತದಲ್ಲಿ 1 ರನ್ ಕಲೆಹಾಕಿದರು. 4ನೇ ಎಸೆತದಲ್ಲಿ ಮತ್ತೊಂದು ರನ್ ಓಡಿದರು. ಐದನೇ ಎಸೆತದಲ್ಲಿ ರಸೆಲ್ 2 ರನ್ ಬಾರಿಸಿದರು.

ಅಂತಿಮ ಎಸೆತದಲ್ಲಿ ಗೆಲ್ಲಲು 2 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಡೀಪ್ ಮಿಡ್​ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿ ಆ್ಯಂಡ್ರೆ ರಸೆಲ್ ರೋಚಕ ಜಯ ತಂದುಕೊಟ್ಟರು. ಕೇವಲ 6 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 1 ಫೋರ್​ನೊಂದಿಗೆ 20 ರನ್​ ಚಚ್ಚಿದ ರಸೆಲ್ ಗೆಲುವಿನ ರೂವಾರಿ ಎನಿಸಿಕೊಂಡರು.

ಸರ್ರೆ ಜಾಗ್ವಾರ್ಸ್ ಪ್ಲೇಯಿಂಗ್ 11: ಜತೀಂದರ್ ಸಿಂಗ್ , ಲಿಟ್ಟನ್ ದಾಸ್ (ವಿಕೆಟ್ ಕೀಪರ್) , ಮೊಹಮ್ಮದ್ ಹ್ಯಾರಿಸ್ , ಇಫ್ತಿಕಾರ್ ಅಹ್ಮದ್ (ನಾಯಕ) , ಪರ್ಗತ್ ಸಿಂಗ್ , ಅಯಾನ್ ಖಾನ್ , ಮ್ಯಾಥ್ಯೂ ಫೋರ್ಡ್ , ದಿಲ್ಲನ್ ಹೇಲಿಗರ್ , ಸಂದೀಪ್ ಲಾಮಿಚಾನೆ , ಸ್ಪೆನ್ಸರ್ ಜಾನ್ಸನ್ , ಅಮ್ಮರ್ ಖಾಲಿದ್.

ಮಾಂಟ್ರಿಯಲ್ ಟೈಗರ್ಸ್ ಪ್ಲೇಯಿಂಗ್ 11: ಕ್ರಿಸ್ ಲಿನ್ (ನಾಯಕ) , ಮುಹಮ್ಮದ್ ವಾಸಿಂ , ಶ್ರೀಮಂತ ವಿಜೆರತ್ನೆ (ವಿಕೆಟ್ ಕೀಪರ್) , ದಿಲ್ಪ್ರೀತ್ ಸಿಂಗ್ , ಶೆರ್ಫನ್ ರುದರ್ಫೋರ್ಡ್ , ದೀಪೇಂದ್ರ ಸಿಂಗ್ ಐರಿ , ಆ್ಯಂಡ್ರೆ ರಸೆಲ್ , ಕಾರ್ಲೋಸ್ ಬ್ರಾಥ್​ವೈಟ್ , ಅಯಾನ್ ಅಫ್ಜಲ್ ಖಾನ್ , ಅಬ್ಬಾಸ್ ಅಫ್ರಿದಿ , ಕಲೀಮ್ ಸನಾ.

ತಾಜಾ ಸುದ್ದಿ

Leave A Reply

Your email address will not be published.