EBM News Kannada
Leading News Portal in Kannada

ಹುಬ್ಬಳ್ಳಿಯಲ್ಲಿ ಲಾಕ್‌ಡೌನ್‌ ಎಫೆಕ್ಟ್‌ಗೆ ದಿಕ್ಕೆಟ್ಟಿರುವ ನಿರ್ಗತಿಕರು; ರೈಲ್ವೇ ಹಳಿಯ ಪಕ್ಕದಲ್ಲೇ ಉಪವಾಸ ವಾಸ್ತವ್ಯ

0

ಹುಬ್ಬಳ್ಳಿ (ಏಪ್ರಿಲ್ 17); ಲಾಕ್‌ಡೌನ್‌ ಎಫೆಕ್ಟ್‌ಗೆ ನಿರ್ಗತಿಕರ ಬದುಕು ನರಕ ಸದೃಶವಾಗಿದೆ. ಹುಬ್ಬಳ್ಳಿಯಲ್ಲಿ ನಿರ್ಗತಿಕರು ರೈಲ್ವೇ ಹಳಿಯ ಪಕ್ಕದಲ್ಲಿನ ಪೊದೆಯಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಕೇಂದ್ರ ರೈಲು ನಿಲ್ದಾಣದಿಂದ ಕೂಗಳತೆ ದೂರದಲ್ಲಿ ದಯನೀಯ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಹುಬ್ಬಳ್ಳಿ- ಗದಗ ರಸ್ತೆಯ ರೈಲ್ವೇ ಬ್ರಿಜ್ ಕೆಳಗೆ ಆಹಾರ, ನೀರಿಗಾಗಿ ಪರದಾಡುತ್ತಿದ್ದಾರೆ.

ಕಳೆದೊಂದು ತಿಂಗಳಿಂದ ಹಸಿವಿನಿಂದ ಕಂಗಾಲಾಗಿರುವ 25 ಜನರಿಗೆ ಯಾರಾದರೂ ದಾನಿಗಳು ತಿನ್ನಲು ಕೊಟ್ಟರೆ ಊಟ, ಇಲ್ಲದಿದ್ದರೆ ಉಪವಾಸವೇ ಗತಿ. ರೈಲ್ವೇ ಹಳಿಯ ಕಬ್ಬಿಣದ ಸರಳುಗಳ ಮೇಲೆ ನಿದ್ದೆ ಮಾಡುವ ಇವರಿಗೆ ಸ್ವಚ್ಛತೆ, ಸಾಮಾಜಿಕ ಅಂತರದ ಅರಿವೇ ಇಲ್ಲ. ಗುಂಪಾಗಿ ಒಂದುಕಡೆ ಸೇರಿದ್ದಕ್ಕೆ ಪೊಲೀಸರಿಂದ ಲಾಠಿ ಏಟು ತಿನ್ನುತ್ತಿದ್ದಾರೆ.

ಇವರೆಲ್ಲರೂ ಬೇರೆಬೇರೆ ಜಿಲ್ಲೆಯವರು. ನಾಲ್ವರು ಬಿಹಾರ ರಾಜ್ಯದವರು. ಒಬ್ಬೊಬ್ಬ ವ್ಯಕ್ತಿಯ ಹಿಂದೆಯೂ ಒಂದೊಂದು ನೋವಿನ ಕಥೆಯಿದೆ. ಕೆಲಸವೂ ಇಲ್ಲದೆ ಸ್ವಂತ ಊರುಗಳಿಗೂ ಹೋಗಲಾಗದೆ ಅತಂತ್ರರಾಗಿದ್ದಾರೆ. ಹುಬ್ಬಳ್ಳಿಗೆ ಕೆಲಸ ಹುಡುಕಿಕೊಂಡು ರೈಲಿನಲ್ಲಿ ಬಂದು ಇಳಿದವರು ಪರದೇಶಿಗಳಂತೆ ಬದುಕುತ್ತಿದ್ದಾರೆ.

ಹೋಟೆಲ್‌ಗಳು ಸೇರಿದಂತೆ ವಿವಿದೆಡೆ ದಿನಗೂಲಿ ಕೆಲಸ ಮಾಡಿಕೊಂಡಿದ್ದರು. ಆದರೆ ಲಾಕ್‌ಡೌನ್ ಘೋಷಣೆ ಆಗುತ್ತಿದ್ದಂತೆ ಬೀದಿಗೆ ಬಂದಿದ್ದಾರೆ. ರೈಲ್ವೇ ಹಳಿಯ ಮಾರ್ಗದಲ್ಲಿ ಸಾಗುತ್ತಾ ಬಂದು ರೈಲ್ವೇ ಬ್ರಿಜ್ ಕೆಳಗೆ ಆಶ್ರಯ ಪಡೆದಿದ್ದಾರೆ.

ದಿನನಿತ್ಯದ ಊಟಕ್ಕೂ ಪರಿತಪಿಸುತ್ತಿದ್ದಾರೆ. ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಮಾಜಿ ಮೇಯರ್ ಅನಿಲ್‌ ಪಾಟೀಲ್, ಪಾಲಿಕೆ ಮಾಜಿ ಸದಸ್ಯೆ ಸುವರ್ಣ ಕಲ್ಲಕುಂಟ್ಲ, ಬಂಗಾರೇಶ್ ಹಿರೇಮಠ ಅವರು ನಿರ್ಗತಿಕರ ಸ್ಥಿತಿ ಗಮನಿಸಿ ಕೈಲಾದ ಸಹಾಯ ಮಾಡುತ್ತಿದ್ದಾರೆ. ಊಟ ಉಪಹಾರದ ವ್ಯವಸ್ಥೆ ಮಾಡಿದ್ದಾರೆ. ಜಿಲ್ಲಾಡಳಿತ ಇವರಿಗೆ ವಸತಿ ಕಲ್ಪಿಸಿ ಆರೋಗ್ಯ ತಪಾಸಣೆ ಮಾಡಬೇಕಾದ ಅವಶ್ಯಕತೆಯಿದೆ.

Leave A Reply

Your email address will not be published.