ಹೊಸಕೋಟೆಯಲ್ಲಿ ಲಾಕಪ್ ಡೆತ್ ಪ್ರಕರಣ: ಸಿಐಡಿ ತನಿಖೆ – ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್
ಹೊಸಕೋಟೆ: ನಾಲ್ಕು ದಿನಗಳ ಹಿಂದೆ ಮದ್ಯ ಕಳ್ಳತನ ಆರೋಪದ ಮೇಲೆ ಬಂಧಿತನಾಗಿದ್ದ ಮುನಿಪಿಳ್ಳಪ್ಪ ನಿನ್ನೆ ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇದು ಲಾಕಪ್ ಡೆತ್ ಕೇಸ್ ಎಂಬ ಆರೋಪ ಕೇಳಿಬಂದಿದೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದ್ದು, ತಿರುಮಶೆಟ್ಟಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಕೊಲೆ ಆರೋಪ ದಾಖಲಾಗಿದೆ. ಅದೇ ಠಾಣೆಯ ಇನ್ಸ್ಪೆಕ್ಟರ್ ರಘು ಮತ್ತು ಸಬ್ಇನ್ಸ್ಪೆಕ್ಟರ್ ರಾಕೇಶ್ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿ ಪ್ರಕರಣ ದಾಖಲಾಗಿದೆ. ಇಬ್ಬರೂ ಸದ್ಯಕ್ಕೆ ತಲೆಮರೆಸಿಕೊಂಡಿದ್ಧಾರೆನ್ನಲಾಗಿದೆ.
ನಾಲ್ಕು ದಿನಗಳ ಹಿಂದೆ ಹೊಸಕೋಟೆಯಲ್ಲಿ ವೈನ್ ಶಾಪ್ನಲ್ಲಿ ಮದ್ಯ ಕಳುವಾಗಿತ್ತು. ಪೊಲೀಸರು ನಡುವತ್ತಿ ಗ್ರಾಮದ 52 ವರ್ಷದ ಮುನಿಪಿಳ್ಳಪ್ಪನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು. ಎಫ್ಐಆರ್ ಕೂಡ ದಾಖಲು ಮಾಡದೇ ಎರಡು ದಿನ ಠಾಣೆಯಲ್ಲೇ ಇರಿಸಿಕೊಂಡಿದ್ದರೆನ್ನಲಾಗಿದೆ. ನಿನ್ನೆ ಮುನಿಪಿಳ್ಳಪ್ಪನ ಶವ ಆತನ ನಡುವತ್ತಿ ಗ್ರಾಮದ ಬಾವಿಯಲ್ಲಿ ಸಿಕ್ಕಿತ್ತು. ಬಾವಿಯಲ್ಲಿ ಕಳ್ಳ ಮಾಲನ್ನು ಇಟ್ಟಿದ್ದರಿಂದ ಆತನನ್ನು ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ತಪ್ಪಿಸಿಕೊಂಡು ಹೋಗಲು ಯತ್ನಿಸಿ ಆತ ಬಾವಿಗೆ ಬಿದ್ದು ಸತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದರು. ಆದರೆ, ಪೊಲೀಸರು ಏಟಿನಿಂದ ಆತ ಸಾವನ್ನಪ್ಪಿದ್ಧಾನೆ ಎಂಬುದು ಗ್ರಾಮಸ್ಥರ ಆರೋಪ.
ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರು ಈ ಸಂಬಂಧ ಡಿಜಿಪಿ ಪ್ರವೀಣ್ ಸೂದ್ ಅವರನ್ನು ಭೇಟಿ ಮಾಡಿ ಮಾತನಾಡಿದ್ಧಾರೆ. ಅದರಂತೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಸಿಐಡಿ ಎಸ್ಪಿ ದೇವರಾಜ್ ಅವರು ಈಗಾಗಲೇ ತನಿಖೆ ಪ್ರಾರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಎನ್ಸ್ಪೆಕ್ಟರ್ ರಘು ಮತ್ತು ಎಸ್ಐ ರಾಕೇಶ್ ಅವರು ತಪ್ಪಿತಸ್ಥರೆಂಬುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ತಿರುಮಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲೇ ಆ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್ಐಆರ್ ಹಾಕಿದ್ದಾರೆ.
ಮೃತಪಟ್ಟಿರುವ ಮುನಿಪಿಳ್ಳಪ್ಪ ಎಸ್ಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ ಈ ಪ್ರಕರಣ ದೊಡ್ಡ ಮಟ್ಟಕ್ಕೆ ಹೋಗುವ ನಿರೀಕ್ಷೆ ಇದೆ.
ಲಾಕ್ ಡೌನ್ ಘೋಷಣೆಯಾದಾಗಿನಿಂದ ರಾಜ್ಯಾದ್ಯಂತ ಎಲ್ಲಿಯೂ ಮದ್ಯ ಮಾರಾಟ ಇಲ್ಲ. ಎಲ್ಲ ಕಡೆಯೂ ಬಂದ್ ಮಾಡಲಾಗಿದೆ. ಹಲವೆಡೆ ಮದ್ಯಕ್ಕಾಗಿ ಹಾಹಾಕಾರವಿದೆ. ಮದ್ಯ ಸಿಗದ ಕಾರಣಕ್ಕೆ ರಾಜ್ಯದಲ್ಲಿ ಹಲವು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಇದೆ. ಮದ್ಯದ ಹತಾಶೆಯಲ್ಲಿ ಕೆಲ ಕಡೆ ಜನರು ಬಾರ್ಗಳಲ್ಲಿ ಮದ್ಯ ಕಳ್ಳತನ ಮಾಡಿದ ಪ್ರಕರಣಗಳು ಅಲ್ಲಲ್ಲಿ ಬೆಳಕಿಗೆ ಬಂದಿವೆ. ಹೊಸಕೋಟೆಯಲ್ಲೂ ಇದೇ ರೀತಿ ವೈನ್ ಶಾಪ್ ಕಳ್ಳತನವಾಗಿತ್ತು.