ವೀರಾಜಪೇಟೆಯಲ್ಲಿ 9 ಮಂದಿ ತಬ್ಲಿಘಿ ಪಂಗಡದ ಮೌಲ್ವಿಗಳು ಪತ್ತೆ
ಕೊಡಗು, ಏಪ್ರಿಲ್ 04: ವೀರಾಜಪೇಟೆಯಲ್ಲಿ 9 ಮಂದಿ ತಬ್ಲಿಘಿ ಪಂಗಡದ ಮೌಲ್ವಿಗಳು ಪತ್ತೆಯಾಗಿದ್ದಾರೆ. ಗುಜರಾತ್ ಮೂಲದ ಮೌಲ್ವಿಗಳು ವೀರಾಜಪೇಟೆ ಮಸೀದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಮಾಧ್ಯಮಗಳಿಗೆ ಜಿಲ್ಲಾ ಎಸ್ಪಿ ಡಾ.ಸುಮನ್ ಪನ್ನೇಕರ್ ಈ ಬಗ್ಗೆ ವಿವರ ನೀಡಿದ್ದಾರೆ. 9 ಮಂದಿ ಮೌಲ್ವಿಗಳು ಫೆಬ್ರವರಿ 2 ರಂದು ವೀರಾಜಪೇಟೆಗೆ ಆಗಮಿಸಿದ್ದರು. 40 ದಿನಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ಲಾಕ್‌ಡೌನ್ ಹಿನ್ನೆಲೆ ಮನೆಯೊಂದಲ್ಲಿ ಉಳಿದುಕೊಂಡಿದ್ದರು. ಆ ಮನೆ ಮಾಲೀಕನನ್ನು ಈಗ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಜಿಲ್ಲಾ ಪೊಲೀಸರಿಂದ ಸಮಗ್ರ ಪರಿಶೀಲನೆ ನಡೆಸಲಾಗಿದೆ. ಎಲ್ಲರ ಗಂಟಲ ದ್ರವವನ್ನು ಪರೀಕ್ಷೆಗೆ ರವಾನೆ ಮಾಡಲಾಗಿದೆ.
”ತಬ್ಲಿಘಿಗಳ ಕೇಂದ್ರ ಸ್ಥಾನ ಮುಂಬೈ. ಮುಂಬೈ ಸಮಾವೇಶ ಮುಗಿಸಿ ವೀರಾಜಪೇಟೆಗೆ ಬಂದು, ಪೊಲೀಸರಿಗೆ ಮಾಹಿತಿ ನೀಡದೆ ಕಾರ್ಯಕ್ರಮ ಮಾಡಿದ್ದಾರೆ. ಸ್ಥಳೀಯ ವೈದ್ಯರಿಗೆ ಮಾಹಿತಿ ನೀಡಿದ್ದಾಗಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ಗುಂಪಾಗಿ ಪಯಣಿಸುವ ತಬ್ಲಿಘಿ ಮೌಲ್ವಿಗಳು ಈವರೆಗೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲ.” ಎಂದು ಜಿಲ್ಲಾ ಎಸ್ಪಿ ಡಾ.ಸುಮನ್ ಪನ್ನೇಕರ್ ಮಾಹಿತಿ ನೀಡಿದ್ದಾರೆ.
ಮಾರುಕಟ್ಟೆ ಚೆಕ್‌ಪೋಸ್ಟ್‌ನಲ್ಲಿ ಇದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು ಮಾಡಿದ್ದು, ಕರ್ನಾಟಕ-ಕೇರಳದ ಗಡಿಯಲ್ಲಿ ಚೆಕ್‌ಪೋಸ್ಟ್ ಇದಾಗಿದೆ. ಗೂಡ್ಸ್ ಲಾರಿಗಳಿಂದ ಅಕ್ರಮ ಹಣ ವಸೂಲಿ ಹಣ ಸಂಗ್ರಹಿಸುತ್ತಿದ್ದ ವಿಡಿಯೋ ಲಭ್ಯವಾಗಿರುವ ಆಧಾರದಲ್ಲಿ ಪೊಲೀಸ್ ಸಿಬ್ಬಂದಿ ಅಮಾನತು ಮಾಡಲಾಗಿದೆ ಎಂದು ಮಾಧ್ಯಮಗಳಿಗೆ ಡಾ.ಸುಮನ್ ಪನ್ನೇಕರ್ ಸ್ಪಷ್ಟನೆ ನೀಡಿದ್ದಾರೆ.