ಕಾಫಿ ಕಾರ್ಮಿಕರಿಗೆ ಊಟ, ಸೂರು ಕೊಟ್ಟ ಚಿಕ್ಕಮಗಳೂರು ಪೊಲೀಸರು
ಚಿಕ್ಕಮಗಳೂರು. ಏಪ್ರಿಲ್ 02: ಕೊರೊನಾ ವೈರಸ್ ಹರಡುವ ಭೀತಿಯಿಂದಾಗಿ ದೇಶವೇ ಲಾಕ್ ಡೌನ್ ಆಗಿದ್ದು, ಇದರ ಪರಿಣಾಮ ಚಿಕ್ಕಮಗಳೂರು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕೂಲಿ ಕಾರ್ಮಿಕರ ಮೇಲೂ ಬಿದ್ದಿದೆ. ಕಳೆದ ಒಂದು ವಾರದಿಂದ ಒಂದು ಕಡೆ ಕೆಲಸವೂ ಇಲ್ಲದೆ, ಮತ್ತೊಂದು ಕಡೆ ಊಟವೂ ಇಲ್ಲದೇ, ಇನ್ನು ಕೆಲವರು ಸೂರು ಇಲ್ಲದೆ ಪರಿತಪಿಸುತ್ತಿದ್ದ ನೂರಾರು ಜನ ಕೂಲಿ ಕಾರ್ಮಿಕರಿಗೆ ಪೊಲೀಸರೇ ಸೂರು ನಿರ್ಮಿಸಿಕೊಟ್ಟು, ಮೂರು ಹೊತ್ತು ಊಟವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಚಿಕ್ಕಮಗಳೂರ ಜಿಲ್ಲೆ ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ, ಕಲ್ಲತ್ತಿಪುರ, ಕೃಷ್ಣಾಪುರ, ತಣಿಗೆಬೈಲು, ಕೆಮ್ಮಣ್ಣುಗುಂಡಿ ಭಾಗದ ಎಸ್ಟೇಟ್ ಗಳಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಜನ ಕೂಲಿ ಕಾರ್ಮಿಕರು ಅತಂತ್ರರಾಗಿದ್ದರು. ಇದನ್ನು ಮನಗಂಡ ಲಿಂಗದಹಳ್ಳಿ ಪೊಲೀಸರು ಎಲ್ಲರಿಗೂ ಶೆಡ್ ಗಳನ್ನು ನಿರ್ಮಾಣ ಮಾಡಿ, ಮೂರು ಹೊತ್ತು ಆಹಾರ ಪೂರೈಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಲಿಂಗದಹಳ್ಳಿ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿಗಳು ತಮ್ಮ ಸಂಬಳದಲ್ಲಿ ಸ್ವಲ್ಪ ಹಣವನ್ನು ಹಾಕಿ ಎಲ್ಲರಿಗೂ ಕಳೆದ ಒಂದು ವಾರದಿಂದ ಆಹಾರವನ್ನು ತಾವೇ ತಯಾರು ಮಾಡಿಸಿ ಕೂಲಿ ಕಾರ್ಮಿಕರು ಇರುವ ಜಾಗಕ್ಕೆ ಹೋಗಿ ಕೊಡುತ್ತಾರೆ.