ಜಯಲಲಿತಾ ಸಾವು ಪ್ರಕರಣ, ಅಪೊಲೋ ಆಸ್ಪತ್ರೆಯಿಂದ ಆಡಿಯೋ ಬಿಡುಗಡೆ!
ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಜೆ. ಜಯಲಲಿತಾ ಅವರ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ನಾನಾ ಬಗೆಯ ಉಹಾಪೋಹಗಳು ಹರಿದಾಡುತ್ತಿರುವ ಬೆನ್ನಲ್ಲೇ ಚೆನ್ನೈನ ಅಪೊಲೋ ಆಸ್ಪತ್ರೆ ಆಡಳಿತ ಮಂಡಳಿ ಆಡಿಯೋವೊಂದನ್ನು ಬಿಡುಗಡೆ ಮಾಡಿದೆ.
ಆಡಿಯೋದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ ಅವರು ಮಾತನಾಡಿದ್ದು, ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದ್ದಾರೆ. ಚಿಕಿತ್ಸೆಗೆಂದು ದಾಖಲಾಗಿದ್ದ ಸಂದರ್ಭದಲ್ಲಿ ಜಯಲಲಿತಾ ಅವರು ಸಿಬ್ಬಂದಿ ಜತೆ ಮಾತನಾಡಿದ್ದು, 52 ಸೆಕೆಂಡ್‌ಗಳ ಈ ಆಡಿಯೋ ಕ್ಲಿಪ್ ಅನ್ನು ಜಯಲಲಿತಾ ಪ್ರಕರಣದ ವಿಚಾರಣೆ ನಡೆಸುತ್ತಿರುವ ಏಕವ್ಯಕ್ತಿ ಆಯೋಗದ ಮುಖ್ಯಸ್ಥ ನ್ಯಾ. ಎ. ಅರುಮುಗಸ್ವಾಮಿ ಶನಿವಾರ ಬಿಡುಗಡೆ ಮಾಡಿದ್ದಾರೆ.
ಆಡಿಯೋದಲ್ಲಿ ಜಯಲಲಿತಾ ವೈದ್ಯರೊಂದಿಗೆ ಮಾತನಾಡುತ್ತಿದ್ದು, ಆಹಾರದ ಪಥ್ಯ ಮತ್ತು ರಕ್ತದೊತ್ತಡದ ಕುರಿತು ಮಾತನಾಡಿದ್ದಾರೆ. ಆಡಿಯೋದಲ್ಲಿ ತಮ್ಮ ರಕ್ತದೊತ್ತಡದ ಪ್ರಮಾಣ ಎಷ್ಟಿದೆ ಎಂದು ವೈದ್ಯರನ್ನು ಜಯಲಲಿತಾ ಕೇಳಿದ್ದಾರೆ. ಆಸ್ಪತ್ರೆಗೆ ದಾಖಲಾದ ಐದು ದಿನಗಳ ನಂತರ, ಸೆಪ್ಟೆಂಬರ್ 27, 2016ರಂದು ರೆಕಾರ್ಡ್ ಆಗಿರುವ ಆಡಿಯೋ ಆಗಿದ್ದು, ಅದರಲ್ಲಿ 140/80 ಬಿಪಿ ಇದೆ, ಥಿಯೇಟರ್‌ನ ಮೊದಲ ಸೀಟಿನಲ್ಲಿ ಕುಳಿತ ಅನುಭವವಾಗುತ್ತಿದೆ, ಉಸಿರಾಡಲು ಕಷ್ಟವಾಗುತ್ತಿದೆ ಎಂದು ಜಯಲಲಿತಾ ಹೇಳಿಕೊಂಡಿದ್ದಾರೆ. ಈ ಆಡಿಯೋ ಕ್ಲಿಪ್ಪಿಂಗ್ ಅನ್ನು ಜಯಲಲಿತಾ ಅವರ ಫಿಜಿಷಿಯನ್ ಪಿ.ಶಿವಕುಮಾರ್ ಅವರು ಆಯೋಗಕ್ಕೆ ಸಲ್ಲಿಸಿದ್ದಾರೆ.
ಈ ಹಿಂದೆ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಲಲಿತಾ ವಿಡಿಯೋ ಕ್ಲಿಪ್ ಬಹಿರಂಗವಾಗಿ ವಿವಾದಕ್ಕೆ ಕಾರಣವಾಗಿತ್ತು.