‘ಮತ್ತೆ ಮರುಕಳಿಸದಿರಲಿ’; ತೂತುಕುಡಿ ಗೋಲಿಬಾರ್ ಕುರಿತು ವಿಶ್ವಸಂಸ್ಥೆ ತೀವ್ರ ಕಳವಳ
ವಿಶ್ವಸಂಸ್ಥೆ: ಸ್ಟೆರ್ಲೈಟ್ ಸಂಸ್ಥೆಯ ವಿರುದ್ದ ತಮಿಳುನಾಡಿನ ತೂತುಕುಡಿಯಲ್ಲಿ ನಡೆದ ಪ್ರತಿಭಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿದ್ದು, ಘಟನೆ ಸಂಬಂಧ ಸ್ವತಃ ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುಎನ್ಇಪಿ ಕಾರ್ಯಕಾರಿ ಸಾಮಾನ್ಯ ನಿರ್ದೇಶಕರು, ಘಟನೆಯಿಂದಾಗಿ ತೀವ್ರ ಆತಂಕವಾಗಿದೆ. ಪ್ರತಿಭಟನೆ ಹಿಂಸಾಚಾರ ರಹಿತವಾಗಿರುತ್ತದೆ ಎಂದು ಭಾವಿಸಿದ್ದೇವೆ. ಅಂತೆಯೇ ಗೋಲಿಬಾರ್ ನಲ್ಲಿ ಮೃತರ ಕುಟುಂಬಕ್ಕೆ ನಾವು ಸಂತಾಪ ಸೂಚಿಸುತ್ತೇವೆ. ಅವರ ಕುಟುಂಬಸ್ಥರಿಗೆ ದೇವರು ಅಗಲಿಕೆ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ. ಅಂತೆಯೇ ಇಂತಹ ಘಟನೆಗಳು ಮರುಕಳಿಸದಿರಲಿ ಎಂದು ಎರಿಕ್ ಸೊಲ್ಹಿಮ್ ಹೇಳಿದ್ದಾರೆ.
ಇನ್ನು ತಮಿಳುನಾಡಿನ ತೂತುಕುಡಿಯಲ್ಲಿರುವ ಸ್ಟೆರ್ಲೈಟ್ ಸಂಸ್ಥೆಯನ್ನು ಮುಚ್ಚುವಂತೆ ಪರಿಸರವಾಗಿಗಳು ಮತ್ತು ಸ್ಥಳೀಯರು ನಡೆಸಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಈ ವೇಳೆ ಪೊಲೀಸರು ನಡೆಸಿದ ಗೋಲಿಬಾರ್ ಗೆ 13 ಮಂದಿ ಸಾವಿಗೀಡಾಗಿದ್ದರು. ಈ ವಿಚಾರ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು.