ಅಮ್ರೋಹಾ: ಟಿವಿಎಸ್ ಅಪಾಚೆ ಬೈಕ್ ಹಾಗೂ ರೂ. 3 ಲಕ್ಷ ನಗದನ್ನು ವರದಕ್ಷಿಣೆಯಾಗಿ ನೀಡಲಿಲ್ಲವೆಂಬ ಕಾರಣಕ್ಕೆ ಎರಡು ವರ್ಷಗಳ ಹಿಂದಷ್ಟೆ ವಿವಾಹವಾಗಿದ್ದ ಮಹಿಳೆಯೊಬ್ಬರನ್ನು ಆತನ ಪತಿಯೇ ಥಳಿಸಿ, ಉಸಿರುಗಟ್ಟಿಸಿ ಹತ್ಯೆಗೈದಿರುವ ಘಟನೆ ಅಮ್ರೋಹಾದಲ್ಲಿ ನಡೆದಿದೆ.
ಬೈಖೇಡಾ ಗ್ರಾಮದ ನಿವಾಸಿಯಾದ ಆರೋಪಿ ಸುಂದರ್, ಮೀನಾ ಎಂಬ ಯುವತಿಯನ್ನು ಎರಡು ವರ್ಷಗಳ ಹಿಂದಷ್ಟೆ ವಿವಾಹವಾಗಿದ್ದ. ಅಂದಿನಿಂದಲೂ ವರದಕ್ಷಿಣಿಗಾಗಿ ಆಕೆಯನ್ನು ಪೀಡಿಸುತ್ತಿದ್ದ ಆತ, ಆಕೆಗೆ ಕಿರುಕುಳವನ್ನೂ ನೀಡುತ್ತಿದ್ದ ಎಂದು ಮೃತ ಯುವತಿಯ ತಂದೆ ಆರೋಪಿಸಿದ್ದಾರೆ.
ರಕ್ಷಾಬಂಧನ್ ಹಬ್ಬಕ್ಕಾಗಿ ಮೀನಾ ತನ್ನ ತಂದೆ ವಾಸಿಸುತ್ತಿರುವ ಸೊಹಾರ್ಕದ ನಿವಾಸಕ್ಕೆ ಇತ್ತೀಚೆಗೆ ತೆರಳಿದ್ದರು ಎನ್ನಲಾಗಿದೆ. ಸುಂದರ್ ಕೂಡಾ ಪ್ರತಿದಿನ ಅಲ್ಲಿಗೆ ಭೇಟಿ ನೀಡಿ, ಅಲ್ಲಿಯೇ ಊಟೋಪಚಾರವನ್ನೂ ಮಾಡುತ್ತಿದ್ದ ಎಂದು ಹೇಳಲಾಗಿದೆ. ರವಿವಾರ ರಾತ್ರಿ ಕೂಡಾ ಅವರ ನಿವಾಸಕ್ಕೆ ಭೇಟಿ ನೀಡಿರುವ ಆತ, ತನ್ನೊಂದಿಗೆ ತನ್ನ ಪತ್ನಿ ಮೀನಾಳನ್ನು ತನ್ನ ನಿವಾಸಕ್ಕೆ ಕರೆದೊಯ್ದಿದ್ದಾನೆ.
ಅಲ್ಲಿ ಮತ್ತೊಮ್ಮೆ ವರದಕ್ಷಿಣೆಗಾಗಿ ಮೀನಾರೊಂದಿಗೆ ವಾಗ್ವಾದಕ್ಕಿಳಿದಿರುವ ಸುಂದರ್, ತನ್ನ ತವರು ಮನೆಯಿಂದ ವರದಕ್ಷಿಣೆ ತರಲಿಲ್ಲವೆಂದು ಆಕೆಯ ಮೇಲೆ ದೊಣ್ಣೆಯಿಂದ ಮನಬಂದಂತೆ ಹಲ್ಲೆ ನಡೆಸಿ, ಕತ್ತು ಹಿಚುಕಿ ಪರಾರಿಯಾಗಿದ್ದಾನೆ. ಮೀನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕೂಡಲೇ ಸ್ಥಳೀಯರು ಈ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದು, ಮೃತ ಯುವತಿಯ ಕುಟುಂಬದ ಸದಸ್ಯರು ಪೊಲೀಸ್ ಠಾಣೆಗೆ ತೆರಳಿ, ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಮೃತ ಯುವತಿ ಮೀನಾರ ತಂದೆ ವಿಜಯ್ ಖಡಕ್ ಬನ್ಷಿಯ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಸುಂದರ್ ಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಮೃತ ಯುವತಿಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.