EBM News Kannada
Leading News Portal in Kannada

85 ವರ್ಷಕ್ಕಿಂತ ಹೆಚ್ಚಿನ ವೃದ್ಧ ಮತದಾರರು ಈ ರಾಜ್ಯದಲ್ಲಿ ಅತ್ಯಧಿಕ

0


ಮುಂಬೈ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮತದಾನಕ್ಕೆ ಅರ್ಹರಾಗಿರುವ 85 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮತದಾರರನ್ನು ಅತ್ಯಧಿಕ ಸಂಖ್ಯೆಯಲ್ಲಿ ಹೊಂದಿರುವ ರಾಜ್ಯ ಎಂಬ ಖ್ಯಾತಿಗೆ ಮಹಾರಾಷ್ಟ್ರ ಪಾತ್ರವಾಗಿದೆ. ಏಪ್ರಿಲ್ 8ರವರೆಗೆ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ಈ ವಯೋವರ್ಗದ 13 ಲಕ್ಷ ಮತದಾರರು ರಾಜ್ಯದಲ್ಲಿದ್ದಾರೆ.

ಈ ವಯೋವರ್ಗದ 10.4 ಲಕ್ಷ ಮತದಾರರನ್ನು ಹೊಂದಿರುವ ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದ್ದು, 6.6 ಲಕ್ಷ ವೃದ್ಧ ಮತದಾರರನ್ನು ಹೊಂದಿರುವ ಬಿಹಾರ ಮೂರನೇ ಹಾಗೂ 6.1 ಲಕ್ಷ ಮತದಾರರನ್ನು ಹೊಂದಿರುವ ತಮಿಳುನಾಡು ನಾಲ್ಕನೇ ಸ್ಥಾನದಲ್ಲಿದೆ. ದೇಶಾದ್ಯಂತ 85+ ವರ್ಗದ 81 ಲಕ್ಷ ಮತದಾರರಿದ್ದಾರೆ. ಈ ಪೈಕಿ ಮಹಾರಾಷ್ಟ್ರದ ಪಾಲು ಶೇಕಡ 16ರಷ್ಟಾಗಿದೆ.

85+ ವರ್ಗದ ಮತದಾರರ ಅತ್ಯಂತ ಕನಿಷ್ಠ ನೋಂದಣಿ ಇರುವುದು ಕೇಂದ್ರಾಡಳಿತ ಪ್ರದೇಶಗಳಲ್ಲಿ. ಲಕ್ಷದೀಪದಲ್ಲಿ ಕೇವಲ 50 ಪುರುಷರು ಹಾಗೂ 59 ಮಂದಿ ಮಹಿಳೆಯರು ಈ ವರ್ಗದಲ್ಲಿ ನೋಂದಾಯಿಸಿಕೊಂಡಿದ್ದಾರೆ. ದಾದ್ರ ಮತ್ತು ನಗರ ಹವೇಲಿ, ಡಮನ್ ಮತ್ತು ಡಿಯೊಗಳಲ್ಲಿ 698 ಮತದಾರರಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಈ ವರ್ಗದ 1037 ಮತದಾರರು ಹೆಸರು ನೊಂದಾಯಿಸಿದ್ದಾರೆ.

ಮಹತ್ವದ ಅಂಶವೆಂದರೆ ಈ ವರ್ಗದಲ್ಲಿ ಮಹಿಳಾ ಮತದಾರರ ಸಂಖ್ಯೆ ಪುರುಷರ ಸಂಖ್ಯೆಯನ್ನು ಮೀರಿದೆ. ದೇಶದ ಇಂಥ 81 ಲಕ್ಷ ಮತದಾರರ ಪೈಕಿ 47.3 ಲಕ್ಷ ಅಂದರೆ ಶೇಕಡ 58ರಷ್ಟು ಮಹಿಳೆಯರು. ಪುರುಷರ ಪಾಲು 33.8 ಲಕ್ಷ. ಮಹಾರಾಷ್ಟ್ರದಲ್ಲಿ ಮಹಿಳೆಯರ ಪಾಲು ಶೇಕಡ 48ರಷ್ಟು ಮಾತ್ರ ಇದೆ. ಆದರೆ 85+ ವರ್ಗದಲ್ಲಿ ಮಹಿಳೆಯರ ಪಾಲು ಶೇಕಡ 56ರಷ್ಟಿದೆ. ರಾಜ್ಯದಲ್ಲಿ ಈ ವರ್ಗದ 5.7 ಲಕ್ಷ ಪುರುಷ ಹಾಗೂ 7.3 ಲಕ್ಷ ಮಹಿಳಾ ಮತದಾರರು ಹೆಸರು ನೊಂದಾಯಿಸಿದ್ದಾರೆ.

Leave A Reply

Your email address will not be published.