ಗುವಾಹತಿ: ಅಸ್ಸಾಂನಲ್ಲಿ 89 ವರ್ಷ ಹಳೆಯ ಮುಸ್ಲಿಂ ಮರುವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ ರದ್ದತಿಗೆ ಅಸ್ಸಾಂ ಸಂಪುಟ ಅನುಮೋದನೆ ನೀಡಿದೆ.
“ನಮ್ಮ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಈಗಾಗಲೇ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವ ಘೋಷಣೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ನಾವು ಇಂದು ಮಹತ್ವದ ನಿರ್ಣಯವನ್ನು ಕೈಗೊಂಡು ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ-1935ನ್ನು ರದ್ದುಪಡಿಸುವ ನಿರ್ಧಾರಕ್ಕೆ ಬಂದಿದ್ದೇವೆ” ಎಂದು ಪ್ರವಾಸೋದ್ಯಮ ಖಾತೆ ಸಚಿವ ಜಯಂತ ಮಲ್ಲಾ ಬೋರಾ ಹೇಳಿದ್ದಾರೆ.
ಇಂದಿನ ನಿರ್ಧಾರದ ಪರಿಣಾಮವಾಗಿ ಮುಸ್ಲಿಂ ವ್ಯಕ್ತಿಗಳು ತಮ್ಮ ವಿವಾಹ ಹಾಗೂ ನೋಂದಣಿಯನ್ನು ಈ ಕಾಯ್ದೆಯಡಿ ನೋಂದಾಯಿಸಲು ಸಾಧ್ಯವಾಗುವುದಿಲ್ಲ. ಈಗಾಗಲೇ ನಾವು ವಿಶೇಷ ವಿವಾಹ ಕಾಯ್ದೆಯನ್ನು ಜಾರಿಗೆ ತಂದಿದ್ದು, ಆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲೇ ವಿವಾಹಗಳನ್ನು ನೋಂದಣಿ ಮಾಡಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.