EBM News Kannada
Leading News Portal in Kannada

ಮಣಿಪುರ: ಐಆರ್‌ಬಿ ಯೋಧ ಸಹಿತ ಇಬ್ಬರ ಹತ್ಯೆ

0ಇಂಫಾಲ: ಭದ್ರತಾ ಪಡೆಯ ಯೋಧ ಹಾಗೂ ಅವರ ವಾಹನ ಚಾಲಕನನ್ನು ಇಂಫಾಲ ಕಣಿವೆ ಮೂಲದ ಭಯೋತ್ಪಾದಕ ಗುಂಪಿನ ಶಂಕಿತ ಸದಸ್ಯರು ಕಂಗ್‌ಪೊಕ್ಪಿ ಜಿಲ್ಲೆಯಲ್ಲಿ ಸೋಮವಾರ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.

ಇಬ್ಬರು ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ರಾಜ್ಯದ ಬಹುಸಂಖ್ಯಾತ ಸಮುದಾಯಕ್ಕೆ ಸೇರಿದ ಶಂಕಿತ ಭಯೋತ್ಪಾದಕ ಗುಂಪಿನ ಸದಸ್ಯರು ಹಾರೌಥೆಲ್ ಹಾಗೂ ಕೊಬ್ಶಾ ಗ್ರಾಮಗಳ ನಡುವೆ ಹೊಂಚು ದಾಳಿ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟವರಲ್ಲಿ ಓರ್ವ ಇಂಡಿಯನ್ ರಿಸರ್ವ್ ಬೆಟಾಲಿಯನ್ (ಐಆರ್‌ಬಿ)ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ಅವರು ತಿಳಿಸಿದ್ದಾರೆ.

ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಸಂದರ್ಭ ಬಂಡುಕೋರರ ಗುಂಪು ಬುಡಕಟ್ಟು ಸಮುದಾಯದ ಸದಸ್ಯರನ್ನು ಗುರಿಯಾಗಿರಿಸಿದ ಕೇಂದ್ರವಾಗಿರುವ ಸಿಂಗ್ಡಾ ಅಣೆಕಟ್ಟಿನ ಸಮೀಪದ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಯಾವುದೇ ಪ್ರಚೋದನೆ ಇಲ್ಲದೆ ಕುಕಿ-ರೆ ಸಮುದಾಯದ ಜನರ ಮೇಲೆ ದಾಳಿ ನಡೆಸಲಾಗಿದೆ ಎಂದು ಬುಡಕಟ್ಟು ಸಂಘಟನೆ ಪ್ರತಿಪಾದಿಸಿದೆ ಹಾಗೂ ಕಂಗ್‌ಪೊಕ್ಪಿ ಜಿಲ್ಲೆ ಬಂದ್‌ಗೆ ಕರೆ ನೀಡಿದೆ.

ಮಣಿಪುರದಲ್ಲಿ ಮೇ ಆರಂಭದಲ್ಲಿ ಮೈತೈ ಹಾಗೂ ಕುಕಿ ಸಮುದಾಯಗಳ ನಡುವೆ ಜನಾಂಗೀಯ ಘರ್ಷಣೆ ಆರಂಭವಾದಂದಿನಿಂದ ಶಸಸ್ತ್ರ ಗ್ರಾಮಸ್ಥರ ನಡುವೆ ಗುಡಿನ ಕಾಳಗದಂತಹ ಹಲವು ಘಟನೆಗಳಿಗೆ ಈ ಪ್ರದೇಶ ಸಾಕ್ಷಿಯಾಗಿದೆ.

ಈ ಪ್ರದೇಶದಲ್ಲಿ ಹೆಚ್ಚುವರಿ ಪಡೆಯನ್ನು ನಿಯೋಜಿಸಲಾಗಿದೆ ಹಾಗೂ ಘಟನೆಯಲ್ಲಿ ಪಾಲ್ಗೊಂಡವರ ಬಂಧನಕ್ಕೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Leave A Reply

Your email address will not be published.