ಹೈದರಾಬಾದ್: ತೆಲಂಗಾಣ ರಾಜ್ಯಕ್ಕಾಗಿ ನಡೆದ ಹೋರಾಟದ ಸಂದರ್ಭದಲ್ಲಿ ಹಲವು ಜೀವಗಳು ಬಲಿಯಾಗಿದ್ದಕ್ಕೆ ಕಾಂಗ್ರೆಸ್ ಪಕ್ಷವು ವಿಷಾದಿಸುತ್ತದೆ ಎಂದು ಗುರುವಾರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಕ್ಷಮೆ ಯಾಚಿಸಿದ್ದಾರೆ.
ಚುನಾವಣಾ ರಾಜ್ಯವಾದ ತೆಲಂಗಾಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ತೆಲಂಗಾಣ ರಾಜ್ಯಕ್ಕಾಗಿನ ಹೋರಾಟದ ಸಂದರ್ಭದಲ್ಲಿ ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು ದುರದೃಷ್ಟಕರ ಘಟನೆಯಾಗಿದೆ. ಜನರ ಹೋರಾಟದ ಸಂದರ್ಭದಲ್ಲಿ ಕೆಲವರು ಮೃತಪಟ್ಟಿದ್ದಕ್ಕೆ ವಿಷಾದವಿದೆ. ಆದರೆ, ಅದಕ್ಕೆ ಕೇಂದ್ರ ಸರ್ಕಾರವನ್ನು ಹೊಣೆಯಾಗಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ತೆಲಂಗಾಣ ರಾಜ್ಯ ರಚನೆಯ ಘೋಷಣೆಯನ್ನು 2009ರಲ್ಲೇ ಮಾಡಿದರೂ, 2014ರವರೆಗೂ ಪ್ರತ್ಯೇಕ ರಾಜ್ಯ ರಚನೆ ಮಾಡದೆ ಇದ್ದುದರಿಂದ ನಡೆದ ತೆಲಂಗಾಣ ರಾಜ್ಯ ಪರ ಹೋರಾಟದ ಸಂದರ್ಭದಲ್ಲಿ ನಡೆದ ಆತ್ಮಹತ್ಯೆಗಳಿಗೆ ಕಾಂಗ್ರೆಸ್ ಕಾರಣ ಎಂಬ ಬಿಆರ್‍ಎಸ್ ಪಕ್ಷದ ಆರೋಪದ ಕುರಿತು ಅವರು ಪ್ರತಿಕ್ರಿಯಿಸುತ್ತಿದ್ದರು.
ತೆಲಂಗಾಣ ರಾಜ್ಯ ರಚನೆಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರಾಗಿದ್ದ ಪಿ.ಚಿದಂಬರಂ, ದ್ವಿಪಕ್ಷಗಳ ನಡುವೆ ಒಪ್ಪಂದವಿದ್ದಾಗ ಹೇಗೆ ಸರ್ಕಾರವು ಪರಿಶ್ರಮ ಪಡಬೇಕಾಗುತ್ತದೆ ಎಂಬ ಸಂಗತಿಯನ್ನು ವಿವರಿಸಿದರು. “ನೂತನವಾಗಿ ರಾಜ್ಯವನ್ನು ರಚಿಸುವುದು ಅಥವಾ ರಾಜ್ಯವೊಂದನ್ನು ವಿಭಜಿಸುವುದು ಮಕ್ಕಳಾಟವಲ್ಲ. ಅದನ್ನು ಹಾಗೆಲ್ಲ ಮಾಡಲು ಸಾಧ್ಯವಿಲ್ಲ. ಜನರ ಹೋರಾಟದ ನಂತರ ರಚನೆಯಾದ ಆಂಧ್ರಪ್ರದೇಶದಂಥದೇ ಅಸಲಿ ರಾಜ್ಯವನ್ನು ಸೃಷ್ಟಿಸಲಾಯಿತು. ರಾಜ್ಯವೊಂದನ್ನು ಜನರ ಹೋರಾಟಕ್ಕೆ ಪ್ರತಿಯಾಗಿ ವಿಭಜಿಸಲಾಯಿತು. ಈ ಸಂದರ್ಭದಲ್ಲಿ ಕೆಲವು ಜೀವಗಳು ಬಲಿಯಾಗಿದ್ದರೆ, ಅದಕ್ಕಾಗಿ ನಾವು ವಿಷಾದಿಸುತ್ತೇವೆ” ಎಂದು ಕ್ಷಮೆ ಕೋರಿದ ಚಿದಂಬರಂ, ಕೆ.ಚಂದ್ರಶೇಖರ್ ರಾವ್ ಆಡಳಿತದಲ್ಲಿ ಇಲ್ಲಿಯವರೆಗೆ 4,000ಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅದಕ್ಕೆ ಯಾರು ಹೊಣೆ ಎಂದು ತಿರುಗೇಟು ನೀಡಿದ್ದಾರೆ.
ನಿರ್ದಿಷ್ಟವಾಗಿ ಕೆ.ಚಂದ್ರಶೇಖರ್ ರಾವ್ ಇತಿಹಾಸದ ಉತ್ತಮ ವಿದ್ಯಾರ್ಥಿಯಲ್ಲ ಎಂದು ಟೀಕಿಸಿದ ಪಿ.ಚಿದಂಬರಂ, ಆಂಧ‍್ರಪ್ರದೇಶ ರಾಜ್ಯವನ್ನು ಹೇಗೆ ರಚಿಸಲಾಯಿತು ಎಂಬುದನ್ನು ಸ್ಮರಿಸಿಕೊಂಡರು.