ಮುಂಬೈ: ಬಾಲಿವುಡ್ ನಟಿಯರಾದ ರಶ್ಮಿಕಾ ಮಂದಣ್ಣ ಹಾಗೂ ಕತ್ರಿನಾ ಕೈಫ್ ಅವರ ಡೀಪ್ ಫೇಕ್ ವಿಡಿಯೊ ಮತ್ತು ಫೋಟೊ ಆನ್ ಲೈನ್ ನಲ್ಲಿ ಹರಿದಾಡಿದ ನಂತರ, ಇದೀಗ ಮತ್ತೊಬ್ಬ ಬಾಲಿವುಡ್ ನಟಿ ಕಾಜೋಲ್ ಅವರ ತಿರುಚಿದ ಡೀಪ್ ಫೇಕ್ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆ ವಿಡಿಯೊದಲ್ಲಿನ ತುಣುಕೊಂದರಲ್ಲಿ, ಮಹಿಳೆಯೊಬ್ಬರ ಮುಖವನ್ನು ಕಾಜೋಲ್ ಮುಖದಂತೆ ತಿರುಚಲಾಗಿದ್ದು, ಆಕೆ ಕ್ಯಾಮೆರಾ ಎದುರು ಬಟ್ಟೆ ಬದಲಾಯಿಸುತ್ತಿರುವುದು ಸೆರೆಯಾಗಿದೆ. ಆದರೆ, ಈ ವಿಡಿಯೊವನ್ನು ಪರಿಶೀಲಿಸಿರುವ BoomLiveನಂಥ ಸತ್ಯಶೋಧನಾ ವೇದಿಕೆಗಳು, ವಾಸ್ತವವಾಗಿ ಈ ವಿಡಿಯೊ ಇಂಗ್ಲೆಂಡ್ ಸಾಮಾಜಿಕ ಮಾಧ್ಯಮದ ಇನ್ ಫ್ಲುಯೆನ್ಸರ್ ಒಬ್ಬರದಾಗಿದ್ದು, ಆಕೆ ಈ ವಿಡಿಯೊ ತುಣುಕನ್ನು ‘ಗೆಟ್ ರೆಡಿ ವಿತ್ ಮೀ’ ಟ್ರೆಂಡ್ ನ ಭಾಗವಾಗಿ ಟಿಕ್ ಟಾಕ್ ನಲ್ಲಿ ಪೋಸ್ಟ್ ಮಾಡಿದ್ದರು ಎಂದು ದೃಢಪಡಿಸಿವೆ.
ಕೆಲ ದಿನಗಳ ಹಿಂದಷ್ಟೆ ಈ ಡೀಪ್ ಫೇಕ್ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಈ ವಿಡಿಯೊ ನೋಡಿದ ಹಲವಾರು ಬಳಕೆದಾರರು ಬಟ್ಟೆ ಬದಲಾಯಿಸುತ್ತಿರುವ ಮಹಿಳೆಯು ನಟಿ ಕಾಜೋಲ್ ಎಂದೇ ನಂಬುವಷ್ಟರ ಮಟ್ಟಿಗೆ ಸಂಕಲನದಲ್ಲಿ ಕೈಚಳಕ ತೋರಲಾಗಿದೆ. ಆದರೆ, BoomLive ಹಾಗೂ ಇನ್ನಿತರ ಅಂತರ್ಜಾಲ ತಾಣಗಳು ಆ ವಿಡಿಯೊವನ್ನು ಕೃತಕ ಬುದ್ಧಿಮತ್ತೆ ಸಾಧನಗಳನ್ನು ಬಳಸಿ ತಿರುಚಲಾಗಿದೆ ಎಂದು ಪತ್ತೆ ಹಚ್ಚಿವೆ.
ಇಂಗ್ಲೆಂಡ್ ಇನ್ ಫ್ಲುಯೆನ್ಸರ್ ರೋಸಿ ಬ್ರೀನ್ ಎಂಬಾಕೆ ಈ ವಿಡಿಯೊವನ್ನು ‘ಗೆಟ್ ರೆಡಿ ವಿತ್ ಮೀ’ ಟ್ರೆಂಡ್ ನ ಭಾಗವಾಗಿ ಜೂನ್ 5, 2023ರಂದು ಟಿಕ್ ಟಾಕ್ ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಸದ್ಯ ವೈರಲ್ ಆಗಿರುವ ವಿಡಿಯೊದಲ್ಲಿ ಬ್ರೀನ್ ಮುಖ ಚಹರೆಯನ್ನು ಕಾಜೋಲ್ ಮುಖ ಚಹರೆಯೊಂದಿಗೆ ಬದಲಿಸಲಾಗಿದೆ.
ಈ ಹಿಂದೆ ವೈರಲ್ ಆಗಿದ್ದ ರಶ್ಮಿಕಾ ಮಂದಣ್ಣ ವಿಡಿಯೊ ಪ್ರಕರಣದಲ್ಲಿ ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಮೊದಲಿಗೆ ಹರಿಬಿಟ್ಟಿದ್ದು ಬಿಹಾರದ 19 ವರ್ಷದ ಯುವಕ ಎಂಬ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದ್ದಾರೆ.