EBM News Kannada
Leading News Portal in Kannada

ಹರ್ಯಾಣದ ನೂಹ್ ನಲ್ಲಿ ಹಿಂಸಾಚಾರ: ಸ್ವಘೋಷಿತ ಗೋರಕ್ಷಕ ಬಿಟ್ಟು ಬಜರಂಗಿ ಬಂಧನ

0



ಚಂಡೀಗಢ: ಹಿಂದೂ ಸಂಘಟನೆಯು ಹಮ್ಮಿಕೊಂಡಿದ್ದ ಮೆರವಣಿಗೆಯ ಸಂದರ್ಭದಲ್ಲಿ ಹರ್ಯಾಣದ ನೂಹ್ ನಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನ್ನ ವಿಭಜನೆಯ ಹೇಳಿಕೆಗಳಿಗೆ ಕುಖ್ಯಾತವಾಗಿರುವ ಸ್ವಘೋಷಿತ ಗೋರಕ್ಷಕ ಬಿಟ್ಟು ಬಜರಂಗಿಯನ್ನು ಬಂಧಿಸಲಾಗಿದೆ ಎಂದು indiatoday.in ವರದಿ ಮಾಡಿದೆ.

ಕೇಸರಿ ದಿರಿಸು ಧರಿಸಿ, ಹಿನ್ನೆಲೆಯಲ್ಲಿ ಬೆದರಿಕೆ ಒಡ್ಡುವ ಸಾಹಿತ್ಯ ಹೊಂದಿದ್ದ ಗೀತೆಯನ್ನು ಬಿಟ್ಟು ಬಜರಂಗಿ ಹಾಡುತ್ತಿರುವ ವಿಡಿಯೊ ವೈರಲ್ ಆದ ನಂತರ ಆತನ ವಿರುದ್ಧ ಆಗಸ್ಟ್ 1ರಂದು ಪ್ರಾಥಮಿಕ ಮಾಹಿತಿ ವರದಿ ದಾಖಲಾಗಿತ್ತು.

ಇದಕ್ಕೂ ಮುನ್ನ, ಬಿಟ್ಟು ಬಜರಂಗಿ ನಿಧಾನ ಗತಿಯ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದ. ಅದರಲ್ಲಿ ಆತ ಕೇಸರಿ ದಿರಿಸು ಧರಿಸಿ, “ಗೋಲಿ ಪೆ ಗೋಲಿ ಚಲೇಂಗಿ, ಬಾಪ್ ತೋ ಬಾಪ್ ರಹೇಗಾ (ಗುಂಡಿನ ಮೇಲೆ ಗುಂಡನ್ನು ವಿನಿಮಯ ಮಾಡುತ್ತೇವೆ, ತಂದೆ ತಂದೆಯಾಗಿ ಉಳಿಯಲಿದ್ದಾನೆ) ಎಂಬ ಸಾಹಿತ್ಯ ಹೊಂದಿರುವ ಗೀತೆಗೆ ಹೆಜ್ಜೆ ಹಾಕುತ್ತಿರುವುದು ದಾಖಲಾಗಿತ್ತು.

indiatoday.in ಸುದ್ದಿ ಸಂಸ್ಥೆಯೊಂದಿಗಿನ ಸಂದರ್ಶನದಲ್ಲಿ, ನೂಹ್ ನಲ್ಲಿ ದಾಳಿಗೊಳಗಾಗಿದ್ದ ವಿಶ್ವ ಹಿಂದೂ ಪರಿಷತ್ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಬಿಟ್ಟು ಬಜರಂಗಿಯನ್ನು ಆತನ ವೈರಲ್ ವಿಡಿಯೊ ಕುರಿತು ಪ್ರಶ್ನಿಸಿದಾಗ, “ನನಗೆ ಬೆದರಿಕೆ ಒಡ್ಡಿದವರಿಗೆ ಮಾತ್ರ ನಾನು ಉತ್ತರಿಸಿದ್ದೇನೆ” ಎಂದು ಆತ ಹೇಳಿದ್ದ.

ವಿಶ್ವ ಹಿಂದೂ ಪರಿಷತ್ ನ ‘ಬೃಜ್ ಮಂಡಲ್ ಜಲಾಭಿಷೇಕ ಯಾತ್ರೆ’ಯನ್ನು ಗುಂಪೊಂದು ತಡೆಯಲು ಯತ್ನಿಸಿದ್ದರಿಂದ ನೂಹ್ ನಲ್ಲಿ ಹಿಂಸಾಚಾರ ಸ್ಫೋಟಗೊಂಡಿತ್ತು. ಕಲ್ಲು ತೂರಾಟ ನಡೆದಿತ್ತು, ಕಾರುಗಳಿಗೆ ಬೆಂಕಿ ಹಚ್ಚಲಾಗಿತ್ತು ಹಾಗೂ ಕಳೆದ ಕೆಲವು ದಿನಗಳಿಂದ ನೆರೆಯ ಗುರುಗ್ರಾಮಕ್ಕೂ ಹಿಂಸಾಚಾರ ಹಬ್ಬಿತ್ತು.

ಹಿಂಸಾಚಾರದಲ್ಲಿ ಗುಂಪುಗಳು ಗುರುಗ್ರಾಮದಲ್ಲಿ ಮುಸ್ಲಿಂ ವಿದ್ವಾಂಸರೊಬ್ಬರನ್ನು ಹತ್ಯೆಗೈದಿದ್ದವು. ಇದರ ಬೆನ್ನಿಗೇ ರೆಸ್ಟೋರೆಂಟ್ ಗಳಿಗೆ ಬೆಂಕಿ ಹಚ್ಚಲಾಗಿತ್ತು ಹಾಗೂ ಮಳಿಗೆಗಳನ್ನು ಧ್ವಂಸಗೊಳಿಸಲಾಗಿತ್ತು. ಈ ಹಿಂಸಾಚಾರದಲ್ಲಿ ಆರು ಮಂದಿ ಹತ್ಯೆಗೀಡಾಗಿದ್ದರು.

ಪಲ್ವಾಲ್ ಮನೇಸರ್, ಫರೀದಾಬಾದ್ ಹಾಗೂ ರೇವರಿಯಲ್ಲಿ ಶಸ್ತ್ರಾಸ್ತ್ರ ಬಳಕೆಯ ಘಟನೆಗಳೂ ವರದಿಯಾಗಿದ್ದವು.

ಪರಿಸ್ಥಿತಿ ವಿಷಮಿಸುತ್ತಿರುವುದರಿಂದ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದ್ದು, ತೊಂದರೆಗೆ ಸಿಲುಕಿರುವ ಜಿಲ್ಲೆಗಳಲ್ಲಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಹರಿಯಾಣ ಸರ್ಕಾರದ ಪ್ರಕಾರ, ಹಿಂಸಾಚಾರದ ಸಂಬಂಧ 116 ಮಂದಿಯನ್ನು ಬಂಧಿಸಲಾಗಿದ್ದು, 90 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

Leave A Reply

Your email address will not be published.