EBM News Kannada
Leading News Portal in Kannada

ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ನ್ಯೂಜಿಲೆಂಡ್ ಪ್ರಧಾನಿ

0

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಪ್ರಧಾನ ಮಂತ್ರಿ ಜಸಿಂದಾ ಅರ್ಡೆರ್ನ್ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಅಧಿಕಾರದಲ್ಲಿದ್ದಾಗಲೇ ಮಗುವಿಗೆ ಜನ್ಮ ನೀಡಿದ ವಿಶ್ವದ ಎರಡನೆಯ ಪ್ರಧಾನಿ ಮತ್ತು ನ್ಯೂಜಿಲೆಂಡ್‌ನ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಪಾಕಿಸ್ತಾನದ ಮಾಜಿ ಪ್ರಧಾನಿ ಬೆನ್‌ಜಿರ್ ಭುಟ್ಟೋ 1990ರಲ್ಲಿ ಅಧಿಕಾರದಲ್ಲಿದ್ದಾಗಲೇ ಮಗುವಿಗೆ ಜನ್ಮ ನೀಡಿದ್ದರು.

ಕಳೆದ ವರ್ಷ ರಚನೆಯಾದ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ 37 ವರ್ಷದ ಜಸಿಂದಾ, ನ್ಯೂಜಿಲೆಂಡ್‌ನ ಅತಿ ಕಿರಿಯ ಪ್ರಧಾನಿ ಎಂಬ ಗರಿಮೆಯನ್ನು ಹೊಂದಿದ್ದಾರೆ.

ದೇಶದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಾದ ಅಕ್ಲಂಡ್‌ನಲ್ಲಿ ಜಸಿಂದಾ ಅವರ ಹೆರಿಗೆಯಾಗಿದ್ದು, ಈ ಸಮಯದಲ್ಲಿ ಪತಿ, ಟಿವಿ ವಾಹಿನಿಯಲ್ಲಿ ನಿರೂಪಕರಾಗಿರುವ ಪತಿ ಕ್ಲಾರ್ಕ್ ಗೇಫೋರ್ಡ್ ಜತೆಗಿದ್ದರು. ನವಜಾತ ಶಿಶುವನ್ನು ಮಡಿಲಲ್ಲಿಟ್ಟುಕೊಂಡಿರುವ ಫೋಟೋವನ್ನವರು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಹೆರಿಗೆ ರಜೆಯ ಮೇಲಿರುವ ಜಸಿಂದಾ ಅವರ ಅನುಪಸ್ಥಿತಿಯಲ್ಲಿ ಉಪ ಪ್ರಧಾನಿ ವಿನ್ಸ್ಟನ್ ಪೀಟರ್ 6 ತಿಂಗಳ ಅವಧಿಗೆ ಹಂಗಾಮಿ ಪ್ರಧಾನಿಯಾಗಿ ಕಾರ್ಯಭಾರ ಸಂಭಾಳಿಸಲಿದ್ದಾರೆ. ಆಗಸ್ಟ್ ಹೊತ್ತಿಗೆ ಜಸಿಂದಾ ಕೆಲಸಕ್ಕೆ ಮರಳುವ ಸಾಧ್ಯತೆಗಳಿವೆ. ಬಳಿಕ ಅವರ ಪತಿ ಮಗುವಿನ ಯೋಗಕ್ಷೇಮ ನೋಡಿಕೊಳ್ಳಲಿದ್ದಾರೆ.

ಪ್ರಖ್ಯಾತ ಪ್ರಧಾನಿ ಎನಿಸಿಕೊಂಡಿರುವ ಜೆಸಿಂದಾ ಅವರು ದೇಶವಾಸಿಗಳ ಅನುರಾಗ- ಅಭಿಮಾನ ಗಳಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ದೀರ್ಘಕಾಲದಿಂದ ಪ್ರಗತಿಪರ ನಡೆಗೆ ಹೆಸರಾಗಿದ್ದು, ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ ಮೊದಲ ದೇಶ ( 1893) ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಜಸಿಂದಾ ದೇಶದ ಮೂರನೇ ಮಹಿಳಾ ಪ್ರಧಾನಿಯಾಗಿದ್ದಾರೆ.

Leave A Reply

Your email address will not be published.