ಸಿಎಂ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ; 14 ಜಿಲ್ಲೆಗಳಲ್ಲಿ ಏ.30ರವರೆಗೂ ಲಾಕ್ಡೌನ್ ಮುಂದುವರೆಸಲು ಚಿಂತನೆ
ಬೆಂಗಳೂರು: ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ದೇಶಾದ್ಯಂತ ಏಪ್ರಿಲ್ 14ರವರೆಗೂ ಲಾಕ್ಡೌನ್ ವಿಧಿಸಲಾಗಿದೆ. ಆದರೂ ಮಾರಕ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಏ.14 ನಂತರ ಲಾಕ್ಡೌನ್ ತೆರವುಗೊಳಿಸಬೇಕೇ, ಅಥವಾ ಮುಂದುವರೆಸಬೇಕೇ ಎಂಬ ವಿಚಾರವಾಗಿ ಸಿಎಂ ಬಿಎಸ್ವೈ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಯಿತು.
ಸಭೆಯಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರುಗಳಿಂದ ಲಾಕ್ ಡೌನ್ ಬಗ್ಗೆ ಸಿಎಂ ಬಿಎಸ್ವೈ ಅಭಿಪ್ರಾಯ ಕೇಳಿದರು. ನಿಮ್ಮ ನಿಮ್ಮ ಉಸ್ತುವಾರಿ ಜಿಲ್ಲೆಗಳ ನೈಜ ಸ್ಥಿತಿ ಏನು? ಲಾಕ್ ಡೌನ್ ಬೇಕಾ? ಬೇಡ? ಎಂದು ಅಭಿಪ್ರಾಯ ಕೇಳಿದರು. ಈ ವೇಳೆ ಹಲವು ಸಚಿವರು, ಏಪ್ರಿಲ್ 30ರವರೆಗೆ ರಾಜ್ಯವನ್ನೇ ಸಂಪೂರ್ಣವಾಗಿ ಲಾಕ್ ಡೌನ್ ಮಾಡಿ ಎಂದ ಸಲಹೆ ನೀಡಿದರು. ಇನ್ನು ಕೆಲ ಸಚಿವರು 18 ಜಿಲ್ಲೆಗಳಲ್ಲಿ ಮಾತ್ರ ಲಾಕ್ಡೌನ್ ಮುಂದುವರೆಸಿ ಉಳಿದ ಜಿಲ್ಲೆಗಳ ಲಾಕ್ಡೌನ್ ತೆರವುಗೊಳಿಸಬಹುದು ಎಂದು ಅಭಿಪ್ರಾಯ ಹಂಚಿಕೊಂಡರು.
ಸೋಂಕು ಹೆಚ್ಚಿರುವ ಕಡೆಗಳೆಲ್ಲೆಲ್ಲ ಲಾಕ್ ಡೌನ್ ಮುಂದುವರೆಸಲೇಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು. ಕೆಲವರು 14 ಜಿಲ್ಲೆಗಳನ್ನು ಮಾತ್ರ ಏಪ್ರಿಲ್ 30ರ ತನಕ ಲಾಕ್ ಡೌನ್ ಮಾಡಿ, ಉಳಿದ ಕಡೆ ಸಡಿಲಗೊಳಿಸಿ ಎಂದರು. ಅಂತಿಮವಾಗಿ ನಾಳಿದ್ದು ಪ್ರಧಾನಿ ಜತೆ ಚರ್ಚೆ ಮಾಡಿ ಕನಿಷ್ಠ 14 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಸುವು ಸಿಎಂ ಒಲವು ತೋರಿದರು. ಕೊರೋನಾ ನಿಯಂತ್ರಣ ವಿಚಾರವಾಗಿ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ಅದರಂತೆ ಕೆಲವು ಜಿಲ್ಲೆಗಳ ಉಸ್ತುವಾರಿಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಇದು ಸಂಜೆಯೊಳಗೆ ಅಂತಿಮಗೊಳ್ಳಲಿದೆ.