EBM News Kannada
Leading News Portal in Kannada

‘ತಾಳ್ಮೆಯಿಂದಿರಿ’: ರಾಹುಲ್ ಗಾಂಧಿ ಎಚ್ಚರಿಕೆ ಬೆನ್ನಲ್ಲೇ ತಣ್ಣಗಾದ ‘ಕೈ’ ಬಂಡಾಯ

0

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೇ ಪಕ್ಷದ ವಿರುದ್ಧವೇ ಬಂಡಾಯವೆದಿದ್ದ ಅತೃಪ್ತ ಶಾಸಕರ ಕೋಪ ಕೊನೆಗೂ ತಣ್ಣಗಾಗಿದ್ದು, ರಾಹುಲ್ ಗಾಂಧಿ ಭೇಟಿ ಮಾಡಿದ್ದ ಮಾಜಿ ಸಚಿವ ಎಂಬಿ ಪಾಚೀಲ್ ಗೆ ತಾಳ್ಮೆಯಿಂದ ಇರುವಂತೆ ಕಾಂಗ್ರೆಸ್ ಅಧ್ಯಕ್ಷರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಸ್ಥಾನ ಸಿಗದೆ ಅತೃಪ್ತಗೊಂಡಿರುವ ಕಾಂಗ್ರೆಸ್‌ ಶಾಸಕರ ಆಕ್ರೋಶ ಭಾನುವಾರ ಸ್ವಲ್ಪಮಟ್ಟಿಗೆ ತಣ್ಣಗಾಗಿದೆ ಎನ್ನಲಾಗಿದೆ. ಪಕ್ಷದ ಹೈಕಮಾಂಡ್‌ ನಿಷ್ಠುರ ನಿಲುವು ತೋರಿದ ಪರಿಣಾಮ ಬಂಡಾಯ ನಾಯಕರು ಬರಿಗೈಯಲ್ಲಿ ಕರ್ನಾಟಕಕ್ಕೆ ವಾಪಸ್ ಆಗಿದ್ದಾರೆ. ಅಲ್ಲದೆ ಈ ಸಂಬಂಧ ಮೌನಕ್ಕೆ ಶರಣಾಗಿದ್ದಾರೆ.

ಪ್ರಮುಖವಾಗಿ ಭಿನ್ನಮತೀಯ ಶಾಸಕರ ಬಣದ ಮುಂಚೂಣಿಯಲ್ಲಿರುವ ಮಾಜಿ ಸಚಿವ ಎಂ.ಬಿ. ಪಾಟೀಲರಿಗೆ, ತಾಳ್ಮೆಯಿಂದ ಇರುವಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಶನಿವಾರ ಸೂಚಿಸಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಎಂಬಿ ಪಾಟೀಲ್ ತಮ್ಮ ಅಸಮಾಧಾನವನ್ನು ನುಂಗಿಕೊಂಡು ಬರಿ ಗೈಯಲ್ಲಿ ಕರ್ನಾಟಕಕ್ಕೆ ವಾಪಸ್ ಆಗಿದ್ದಾರೆ. ಇತ್ತ ಬಂಡಾಯ ನಾಯಕ ಅಸಮಾಧಾನ ಶಮನಕ್ಕೆ ಸಕಲ ಕಸರತ್ತು ನಡೆಯುತ್ತಿದ್ದು, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಭಿನ್ನಮತ ಶಮನಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಭಿನ್ನಮತೀಯ ಚಟುವಟಿಕೆ ಕಾಣಿಸಿಕೊಂಡ ಬಳಿಕ ಮೊದಲ ಬಾರಿಗೆ ‘ಮೌನ’ ಮುರಿದಿರುವ ಮೈತ್ರಿ ಸರ್ಕಾರ ಸಮನ್ವಯ ಸಮಿತಿ ಅಧ್ಯಕ್ಷರೂ ಕೂಡ ಆಗಿರುವ ಸಿದ್ದರಾಮಯ್ಯ, ‘ಶಾಸಕರ ಅಸಮಾಧಾನದ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಿದ್ದೇನೆ. ಈಗಿನ ಸಚಿವರಿಗೆ ಎರಡು ವರ್ಷ ಅವಧಿ ನೀಡಿದ್ದೇವೆ. ಮುಂದಿನ ಅವಧಿಯಲ್ಲಿ ಉಳಿದವರಿಗೆ ಅವಕಾಶ ನೀಡಿ ಸಮಾಧಾನಪಡಿಸುತ್ತೇವೆ. ಭಿನ್ನಮತೀಯ ಶಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಎಲ್ಲರೂ ಸಮಾಧಾನಗೊಂಡಿದ್ದಾರೆ. ಯಾವುದೇ ಅತೃಪ್ತಿ ಇಲ್ಲ. ಹೈಕಮಾಂಡ್ ಜೊತೆಗೂ ಮಾತನಾಡಿದ್ದೇನೆ. ಸದ್ಯ ಇನ್ನೊಂದು ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿಯಾಗುವುದಿಲ್ಲ’ ಎಂದೂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಅಂತೆಯೇ ‘ಬಂಡಾಯ ಶಮನಕ್ಕೆ ಮುಂದಾಗುವಂತೆ ರಾಹುಲ್ ಗಾಂಧಿ ಅವರ ಜೊತೆ ಮಾತನಾಡುತ್ತೇವೆ. ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮತ್ತು ಹಿರಿಯ ನಾಯಕ ಗುಲಾಂ ನಬಿ ಆಜಾದ್ ಶಾಸಕರ ಸಂಪರ್ಕದಲ್ಲಿದ್ದು, ಎಲ್ಲ ಸಮಸ್ಯೆಗಳು ಪರಿಹಾರವಾಗಲಿವೆ’ ಮಲ್ಲಿ ಕಾರ್ಜುನ ಎಂದು ಖರ್ಗೆ ಹೇಳಿದ್ದಾರೆ.

Leave A Reply

Your email address will not be published.