EBM News Kannada
Leading News Portal in Kannada

ನನಗೆ ಮುಜರಾಯಿ ಖಾತೆ ಕೊಡಿ, ದೇವಸ್ಥಾನ ಸುತ್ಕೊಂಡು ಕಾಲ ಕಳೀತೀನಿ’: ಸಭೆಯಲ್ಲಿ ಡಿಕೆಶಿ ಅಸಮಾಧಾನ

0

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸಂಪುಟ ರಚನೆ ಕಸರತ್ತು ಇನ್ನೇನು ಮುಕ್ತಾಯವಾಯಿತು ಎಂದು ಕೊಂಡಿರುವಾಗಲೇ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಗೆ ಕಾರಣಕರ್ತರಾಗಿದ್ದ ಡಿಕೆ ಶಿವಕುಮಾರ್ ಅವರೇ ಇದೀಗ ತಮ್ಮದೇ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರದ ಲೆಕ್ಕಾಚಾರಗಳಿಂದ ಅಸಮಾಧಾನಗೊಂಡಿದ್ದಾರೆ. ಪಕ್ಷದ ಸಭೆಯಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕಿರುವ ಡಿಕೆ ಶಿವಕುಮಾರ್ ಅವರು, ಸಂಪುಟ ವಿಸ್ತರಣೆ ಮಾಡಿದಾಗ ನನಗೆ ಮುಜುರಾಯಿ ಖಾತೆ ಕೊಡಿ. ದೇವಸ್ಥಾನ ಸುತ್ತಿಕೊಂಡು ಕಾಲ ಕಳೆಯುತ್ತೇನೆ ಎಂದು ವರಿಷ್ಟರೆದುರು ಹೇಳಿರುವ ಘಟನೆ ಬೆಳಕಿಗೆ ಬಂದಿದೆ.

ಉನ್ನತ ಮೂಲಗಳು ಈ ವಿಷಯವನ್ನು ಸ್ಪಷ್ಟ ಪಡಿಸಿದ್ದು, ಮೈತ್ರಿಕೂಟ ಸರ್ಕಾರದಲ್ಲಿ ತಮಗೆ ಇಂಧನ ಖಾತೆ ನೀಡಬೇಕು ಎಂದು ಪಟ್ಟು ಹಿಡಿದಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ವರಿಷ್ಟರ ಧೋರಣೆಯಿಂದ ಕಸಿವಿಸಿಯಾಗಿದೆ. ಇನ್ನು ಸರ್ಕಾರ ರಚಿಸಲು ಕಾಂಗ್ರೆಸ್ ಬೇಷರತ್ ಬೆಂಬಲ ನೀಡಿದ್ದು, ಐದು ವರ್ಷಗಳ ಕಾಲ ಕುಮಾರಸ್ವಾಮಿಯವರೇ ಸಿಎಂ ಆಗಿರಲಿ ಎಂದು ಹೇಳಿದ್ದೇವೆ. ಅದೇ ರೀತಿ ನಿಮಗೆ ಬೇಕಾದ ಖಾತೆಗಳನ್ನು ನೀವಿಟ್ಟುಕೊಳ್ಳಿ ಎಂದು ಹೇಳಿದ್ದೇವೆ. ಹೀಗಾಗಿ ಖಾತೆಗಾಗಿ ಯಾರೂ ತಕರಾರು ಮಾಡಬೇಡಿ ಎಂದು ಕೈ ಪಾಳಯದ ವರಿಷ್ಟರು ರಾಜ್ಯದ ಪ್ರಮುಖ ನಾಯಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ಡಿಕೆಶಿ ಹೇಳಿದ್ದೇನು?
ಕುಮಾರಸ್ವಾಮಿಯವರೇ ಐದು ವರ್ಷ ಸಿಎಂ ಆಗಿ ಮುಂದುವರೆಯುವ ವಿಚಾರವಾಗಲಿ ಅಥವಾ ನಿಮಗೆ ಬೇಕಾದ ಖಾತೆಗಳನ್ನು ನೀವು ತೆಗೆದುಕೊಳ್ಳಿ ಎಂದು ಜೆಡಿಎಸ್ ಗೆ ನೀವು ಹೇಳಿದ್ದಾಗಲಿ ನಮಗೆ ಗೊತ್ತಿರಲಿಲ್ಲ. ನೀವು ಕೈಗೊಂಡ ತೀರ್ಮಾನದ ಪರಿಣಾಮವಾಗಿ ನಾವು ನಮಗಿಂತ ಜೂನಿಯರ್ ಗಳ ಸಮ್ಮುಖದಲ್ಲಿ ಸಣ್ಣ ಪುಟ್ಟ ಖಾತೆಗಳ ಸಚಿವರಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ.

ಸಹಜವಾಗಿಯೇ ಇದು ನಮ್ಮನ್ನು ಮುಜುಗರಕ್ಕೆ ತಳ್ಳುತ್ತದೆ. ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ನಾವು ಮಂತ್ರಿಯಾಗಲು ಒಪ್ಪದಿದ್ದರೂ ಹೈಕಮಾಂಡ್ ಬೇಸರ ಮಾಡಿಕೊಳ್ಳುತ್ತದೆ. ಸತತವಾಗಿ ಏಳು ಬಾರಿ ವಿಧಾನಸಭೆಗೆ ಆಯ್ಕೆಯಾಗಿ ಬಂದ ನನಗೆ ಪ್ರಮುಖ ಖಾತೆ ಸಿಗದಿದ್ದರೆ ಸಹಜವಾಗಿ ಸಾರ್ವಜನಿಕ ವಲಯಗಳಲ್ಲಿ ನನ್ನ ಶಕ್ತಿಯೂ ಕಡಿಮೆಯಾಗುತ್ತದೆ.

ಈ ಮಧ್ಯೆ ಮೈತ್ರಿಕೂಟ ಸರ್ಕಾರ ರಚಿಸಲು ಪೂರಕವಾಗಿ ಶಾಸಕರನ್ನು ಹಿಡಿದಿಟ್ಟುಕೊಂಡ ಕಾರಣದಿಂದ ತಮ್ಮ ಮೇಲೆ ಕೇಂದ್ರ ಸರ್ಕಾರದ ಕೆಂಗಣ್ಣು ಬಿದ್ದಿದೆ. ನೋಟು ನಿಷೇದದ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಬ್ಯಾಂಕ್ ಮುಖ್ಯಸ್ಥರು ನಡೆಸುತ್ತಿದ್ದ ಆಕ್ರಮಗಳನ್ನು ನನ್ನ ಸಹೋದರ, ಸಂಸದ ಡಿ.ಕೆ.ಸುರೇಶ್ ಪ್ರಶ್ನಿಸಿದ್ದನ್ನೇ ನೆಪವಾಗಿಟ್ಟುಕೊಂಡು ಸಿಬಿಐ ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದಿದೆ. ಈ ಕುರಿತು ವಿವರ ನೋಡಲು ಹೋದರೆ ಅದು ಸಿದ್ಧಪಡಿಸಿರುವ ದೋಷಾರೋಪಣಾ ಪಟ್ಟಿಯಲ್ಲಿ 8 ಜನರ ಹೆಸರು ಮಾತ್ರ ಇದೆ.

ಉಳಿದ ಮೂವರ ಹೆಸರಿಲ್ಲ. ತಮಗಿರುವ ಮಾಹಿತಿಯ ಪ್ರಕಾರ, ಈ ಮೂವರಲ್ಲಿ ನನ್ನ ಮತ್ತು ಸಹೋದರ ಸುರೇಶ್ ಹೆಸರಿದೆ.
ಹೀಗೆ ಅತ್ತ ಕಡೆಯಿಂದ ಕೇಂದ್ರ ಸರ್ಕಾರವೂ ನಮ್ಮ ಮೇಲೆ ಕೆಂಗಣ್ಣು ಬೀರುತ್ತಿದೆ. ಇತ್ತ ಮೈತ್ರಿಕೂಟ ಸರ್ಕಾರದಲ್ಲಿ ಅಶಕ್ತನನ್ನಾಗಿ ಮಾಡಿ ಕೂರಿಸಲು ಪಕ್ಷವೇ ಸಿದ್ಧವಾಗಿದೆ. ಹೀಗಾಗಿ ಒಂದು ಕೆಲಸ ಮಾಡಿ, ನನಗೆ ಪ್ರಮುಖ ಖಾತೆಗಳನ್ನು ನೀಡುವ ಬದಲು ಮುಜುರಾಯಿ ಖಾತೆಯನ್ನು ಕೊಡಿಸಿಬಿಡಿ. ಸುಮ್ಮನೆ ದೇವಾಲಯಗಳನ್ನಾದರೂ ಸುತ್ತುತ್ತಾ ಕಾಲ ಕಳೆಯುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.