EBM News Kannada
Leading News Portal in Kannada

ಕರಾವಳಿಯಲ್ಲಿ ಪಂಚಾತಾರಾ ಹೋಟೆಲ್, ಪ್ರತ್ಯೇಕ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

0


ಬೆಂಗಳೂರು: ಕರಾವಳಿಯಲ್ಲಿ ಉತ್ತಮ ಪಂಚತಾರಾ ಹೋಟೆಲ್ ನಿರ್ಮಾಣ ಸೇರಿದಂತೆ ಆ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ಯೋಜನೆ ರೂಪಿಸಬೇಕೆಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಮಂಗಳವಾರ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರಾವಳಿಯಲ್ಲಿ ಸಿಆರ್‍ಝೆಡ್ ಕಾಯ್ದೆಯಿಂದಾಗಿ ಅಭಿವೃದ್ಧಿಗೆ ಕೆಲವು ತೊಡಕುಗಳಿದ್ದು, ಇದನ್ನು ಬಗೆಹರಿಸಲು ಪ್ರಯತ್ನಿಸಬೇಕು ಎಂದರು.

ಕರಾವಳಿಯಲ್ಲಿ ಮೆಡಿಕಲ್ ಕಾಲೇಜುಗಳು, ಬಂದರುಗಳು, ದೇವಾಲಯಗಳು ಸೇರಿದಂತೆ ಹಲವು ಪ್ರಮುಖ ಸ್ಥಳಗಳಿವೆ. ಆದರೆ ಒಂದೇ ಒಂದು ಪಂಚತಾರಾ ಹೊಟೇಲ್ ಇಲ್ಲ. ಸಂಜೆಯಾಗುತ್ತಿದ್ದಂತೆಯೇ ಇಡೀ ಮಂಗಳೂರು ಮುಚ್ಚಿಕೊಳ್ಳುತ್ತದೆ. ಹೀಗಾಗಿ, ಕರಾವಳಿ ಹಾಗೂ ಮಲೆನಾಡು ಪ್ರದೇಶಕ್ಕೆ ಪ್ರತ್ಯೇಕ ಯೋಜನೆಯನ್ನು ರೂಪಿಸಬೇಕಿದೆ ಎಂದು ಹೇಳಿದರು.

ಕರಾವಳಿಯ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ಇದರಿಂದ ತೆರಿಗೆ ಸಂಗ್ರಹ ಹಾಗೂ ಸ್ಥಳೀಯರಿಗೆ ಉದ್ಯೋಗವಕಾಶ ಸೃಷ್ಠಿಸಲು ಸಾಧ್ಯವಿದೆ. ಕರಾವಳಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮುಂಬೈ, ಗಲ್ಫ್ ದೇಶಗಳಿಗೆ ಉದ್ಯೋಗ ಅರಸಿಕೊಂಡು ಹೋಗುವ ಪರಿಸ್ಥಿತಿ ಬದಲಾಗಬೇಕಿದೆ ಎಂದು ಅವರು ಉಲ್ಲೇಖಿಸಿದರು.

ಉಡುಪಿ, ಮಂಗಳೂರು, ಉತ್ತರಕನ್ನಡ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸ್ಥಳೀಯರೊಂದಿಗೆ ಸೇರಿಕೊಂಡು ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿಪಡಿಸುವ ಕುರಿತು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದ ಅವರು, ಇದರಿಂದ ಉದ್ಯೋಗ ಸೃಷ್ಟಿ ಸಾಧ್ಯವಿದೆ. ಹೊಸ ಪ್ರವಾಸೋದ್ಯಮ ನೀತಿ ರಚಿಸಲು ನಿರ್ಧರಿಸಲಾಗಿದ್ದು, ಈ ಕುರಿತು ವಿಸ್ತೃತವಾದ ಸಮಾಲೋಚನೆ ನಡೆಸಬೇಕು ಎಂದು ಹೇಳಿದರು.

ಅನೇಕ ರಾಜ್ಯಗಳಿಗೆ ಪ್ರವಾಸೋದ್ಯಮವೇ ಪ್ರಮುಖ ಆದಾಯ. ನೆರೆಯ ಕೇರಳದಷ್ಟು ಕೂಡಾ ಪ್ರವಾಸೋದ್ಯಮ ಅಭಿವೃದ್ಧಿ ನಮಗೆ ಸಾಧ್ಯವಾಗಿಲ್ಲ. ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ನೀಲನಕಾಶೆ ಸಿದ್ಧಪಡಿಸಬೇಕು. ಜತೆಗೆ, ಜಿಲ್ಲಾಧಿಕಾರಿಗಳು ಪ್ರವಾಸಿ ತಾಣಗಳ ಅಭಿವೃದ್ಧಿ ಸಾಧ್ಯತೆಗಳನ್ನು ಗುರುತಿಸಬೇಕು. ಖಾಸಗಿ ಸಹಭಾಗಿತ್ವದಲ್ಲಿ ಮಾತ್ರವಲ್ಲ ಸರಕಾರದ ವತಿಯಿಂದಲೂ ಹೆಜ್ಜೆ ಇರಿಸಬೇಕು. ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಎಲ್ಲ ಅಂಶಗಳನ್ನು ಸೇರಿಸಲಾಗುವುದು. ಇದಕ್ಕೆ ಪೂರಕವಾಗಿ ಅನುದಾನವನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.

ಸಚಿವ ಎಚ್.ಕೆ.ಪಾಟೀಲ್ ಪ್ರಸ್ತಾಪಿಸಿ, ರಾಜ್ಯದಲ್ಲಿ 25 ಸಾವಿರ ಸ್ಮಾರಕಗಳಿವೆ. ಇವುಗಳ ಮಹತ್ವ ಅರಿತು ಗೈಡ್‍ಗಳನ್ನು ನೇಮಿಸುವುದಾಗಲಿ, ಸಮೀಕ್ಷೆ ನಡೆಸಿ, ಸಂರಕ್ಷಣೆ ಮಾಡಿ ನಿಮ್ಮ ನಿಮ್ಮ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಮಾಸ್ಟರ್ ಪ್ಲಾನ್ ಸಿದ್ದಪಡಿಸಲು ಅವಕಾಶಗಳಿವೆ. ಇದಕ್ಕೆ ತಕ್ಕಂತೆ ಕ್ರಿಯಾ ಯೋಜನೆ ಮಾಡಿ ಎಂದು ಸೂಚಿಸಿದರು.

ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯೆಲ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಸಚಿವ ಸಂಪುಟದ ಸದಸ್ಯರು ಸೇರಿದಂತೆ ಪ್ರಮುಖರಿದ್ದರು.

Leave A Reply

Your email address will not be published.