EBM News Kannada
Leading News Portal in Kannada

ಎತ್ತಿನಹೊಳೆ ಕಾಮಗಾರಿಗೆ 500 ಎಕರೆ ನೀಡಲು ಅರಣ್ಯ ಇಲಾಖೆ ಒಪ್ಪಿಗೆ : ಡಿಸಿಎಂ ಡಿ.ಕೆ.ಶಿವಕುಮಾರ್

0


ಬೆಂಗಳೂರು: “ಎತ್ತಿನಹೊಳೆ ಕಾಮಗಾರಿಗೆ ಅಡಚಣೆ ಉಂಟು ಮಾಡಿರುವ 500 ಎಕರೆ ಜಾಗವನ್ನು ಹಸ್ತಾಂತರಿಸಲು ಅರಣ್ಯ ಇಲಾಖೆ ಒಪ್ಪಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ನೀರಾವರಿ ಸಚಿವರೂ ಆಗಿರುವ ಶಿವಕುಮಾರ್ ಅವರು ಈ ಯೋಜನೆ ಸಂಬಂಧ ವಿಕಾಸಸೌಧದಲ್ಲಿ ಮಂಗಳವಾರ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಅರಣ್ಯ ಸಚಿವ ಈಶ್ವರ ಖಂಡ್ರೆ, ದಿಲ್ಲಿಯಲ್ಲಿ ಕರ್ನಾಟಕ ಸರಕಾರದ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಹಾಗೂ ಸಂಬಂಧಪಟ್ಟ ಇಲಾಖೆಗಳ ಪ್ರಮುಖ ಅಧಿಕಾರಿಗಳ ಜತೆ ಸಭೆ ನಡೆಸಿದರು.

ಈ ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಿವಕುಮಾರ್ ಅವರು, “ಎತ್ತಿನಹೊಳೆ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ಕೆಲಸ ತ್ವರಿತ ಗತಿಯಲ್ಲಿ ನಡೆಸಲು ಅರಣ್ಯ ಸಚಿವರಾದ ಈಶ್ವರ ಖಂಡ್ರೆ, ದಿಲ್ಲಿ ಪ್ರತಿನಿಧಿ ಟಿ.ಬಿ ಜಯಚಂದ್ರ, ಕಂದಾಯ, ಅರಣ್ಯ, ನೀರಾವರಿ ಇಲಾಖೆ ಅಧಿಕಾರಿಗಳ ಜತೆ ಇಂದು ಚರ್ಚೆ ಮಾಡಿದ್ದೇವೆ” ಎಂದರು.

ʼಯೋಜನೆಗೆ ಅಗತ್ಯವಿರುವ ಜಾಗವನ್ನು ಅರಣ್ಯ ಇಲಾಖೆ ನೀಡುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಕಂದಾಯ ಇಲಾಖೆಯು ಅರಣ್ಯ ಇಲಾಖೆಗೆ 500 ಎಕರೆ ಜಾಗ ನೀಡಲಿದೆ. ಈ ಪ್ರಕ್ರಿಯೆಯನ್ನು ಕಾನೂನು ಚೌಕಟ್ಟಿನಲ್ಲಿ ಪೂರ್ಣಗೊಳಿಸುತ್ತೇವೆ. ಈ ಯೋಜನೆಗಳ ಕಾಮಗಾರಿಗೆ ಎದುರಾಗಿರುವ ಸಮಸ್ಯೆಗಳನ್ನು ಅಧಿಕಾರಿಗಳು ಗುರುತಿಸಿದ್ದು, ಅವುಗಳಿಗೆ ಪರಿಹಾರ ಹುಡುಕಲು ಸಭೆಯಲ್ಲಿ ಚರ್ಚಿಸಿದ್ದೇವೆ” ಎಂದು ತಿಳಿಸಿದರು.

ʼ260 ಕಿ.ಮೀ ಉದ್ಧದ 20 ಸ್ಥಳಗಳಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು ಇವೆ. ಈ ಯೋಜನೆಗೆ ಅರಣ್ಯ ಇಲಾಖೆ ಅನುಮತಿ ಅಗತ್ಯವಿದ್ದ ಕಾರಣ, ನಮ್ಮ ಅರಣ್ಯ ಸಚಿವರು ಹಾಗೂ ಇಲಾಖೆ ಸಚಿವರ ಜತೆ ಚರ್ಚೆ ಮಾಡಿದ್ದೇವೆ. ಈ ವಿಚಾರವಾಗಿ ಕಂದಾಯ, ನೀರಾವರಿ ಹಾಗೂ ಅರಣ್ಯ ಇಲಾಖೆ ಸೇರಿ ಒಟ್ಟಾಗಿ ಜಂಟಿ ಸರ್ವೇ ಮಾಡುತ್ತಿದ್ದೇವೆ. ಅರಣ್ಯ ಇಲಾಖೆಗೆ ಬದಲಿ ಜಮೀನು ನೀಡಲು ಕಂದಾಯ ಇಲಾಖೆ ಒಪ್ಪಿದೆ. ಕೂಡಲೇ ಈ ಕಾಮಗಾರಿ ನಡೆಸಲು ಮನವಿ ಮಾಡಿದ್ದೇವೆʼ ಎಂದು ಮಾಹಿತಿ ನೀಡಿದರು.

ಈ ಮಧ್ಯೆ ಕೆಲವು ಜಾಗದಲ್ಲಿ ರೈತರಿಗೆ 51 ಕೋಟಿ ನೀಡಬೇಕಾಗಿದೆ. ಈ ಪೈಕಿ 10 ಕೋಟಿ ಹಣ ನೀಡಲಾಗಿದ್ದು, 41 ಕೋಟಿ ಬಾಕಿ ಇದೆ. ಈ ಜಾಗದ ವಿಚಾರವಾಗಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ನಡುವೆ ಗೊಂದಲವಿದೆ. ಹೀಗಾಗಿ ಈ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದರು.

ಯಡಿಯೂರಪ್ಪ ಪ್ರಕರಣದ ಮಾಹಿತಿ ಇಲ್ಲ:

ಪೋಕ್ಸೊ ಪ್ರಕರಣದಡಿ ಮಾಜಿ ಸಿಎಂ ಯಡಿಯೂರಪ್ಪ ಅವರ ಬಂಧನಕ್ಕೆ ಕೋರ್ಟ್ ವಾರೆಂಟ್ ಜಾರಿ ಮಾಡಿರುವ ಬಗ್ಗೆ ಕೇಳಿದಾಗ, “ನಾನು ಸಭೆಯಲ್ಲಿದ್ದ ಕಾರಣ, ನನಗೆ ಹೆಚ್ಚಿನ ಮಾಹಿತಿ ಇಲ್ಲ. ಗೃಹ ಸಚಿವಾಲಯ ಈ ವಿಚಾರವನ್ನು ನಿಭಾಯಿಸಲಿದೆ” ಎಂದರು.

ದರ್ಶನ ಪ್ರಕರಣ ಮುಚ್ಚಿಹಾಕಲು ನನ್ನನ್ನು ಯಾರೂ ಸಂಪರ್ಕಿಸಿಲ್ಲ :

ದರ್ಶನ್ ಪ್ರಕರಣದಲ್ಲಿ ಪೊಲೀಸ್ ಠಾಣೆಯನ್ನು ಶಾಮಿಯಾನ ಮೂಲಕ ಮುಚ್ಚಲಾಗಿದೆ. ಈ ಪ್ರಕರಣದಲ್ಲಿ ಸತ್ಯಾಂಶ ಮರೆಮಾಚುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಸಿದ ಅವರು, ”ನನ್ನ ಪ್ರಕರಣದ ಅನುಭವದಲ್ಲೇ ಹೇಳುವುದಾದರೆ, ಅಧಿಕಾರಿಗಳು ನನ್ನನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವಾಗ ಜನರಿಗೆ ಮರೆಮಾಚಿ ಕರೆದುಕೊಂಡು ಹೋಗುವರು. ಕೆಲವು ಬಾರಿ ಅಭಿಮಾನಿಗಳು ಅಡ್ಡಬರುವುದು, ಜೈಕಾರ ಕೂಗುವುದು ಅಥವಾ ಯಾರಾದರೂ ಕಲ್ಲು ಎಸೆಯಬಹುದು ಎಂಬ ಕಾರಣಕ್ಕೆ ಪೊಲೀಸ್ ಅಧಿಕಾರಿಗಳು ಆ ರೀತಿ ಮಾಡುತ್ತಾರೆ. ಈ ಪ್ರಕರಣದಲ್ಲಿ ಪೊಲೀಸರು ಇದೇ ರೀತಿ ಮುನ್ನಚ್ಚರಿಕೆ ಕ್ರಮ ತೆಗೆದುಕೊಂಡಿರಬಹುದು. ನನಗೆ ಮಾಹಿತಿ ಇಲ್ಲ” ಎಂದರು.

Leave A Reply

Your email address will not be published.