EBM News Kannada
Leading News Portal in Kannada

‘ಮೋಡ ಬಿತ್ತನೆ’ ಖಾಸಗಿ ವಿಧೇಯಕ ರಾಜ್ಯಪಾಲರಿಗೆ ರವಾನಿಸಲು ಒಪ್ಪಿಗೆ

0


ಬೆಂಗಳೂರು: ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ‘ಮೋಡ ಬಿತ್ತನೆ’ ಸಂಬಂಧ ಮಂಡಿಸಲಾದ ಖಾಸಗಿ ಸದಸ್ಯರ ವಿಧೇಯಕವನ್ನು ರಾಜ್ಯಪಾಲರ ಅಂಕಿತಕ್ಕೆ ರವಾನಿಸಲು ವಿಧಾನಸಭೆಯಲ್ಲಿ ಗುರುವಾರ ಒಪ್ಪಿಗೆ ನೀಡಲಾಯಿತು.

ವಿಧೇಯಕದ ಕುರಿತ ಚರ್ಚೆಯ ನಡುವೆ ಕಾನೂನು ಸಚಿವ ಎಚ್.ಕೆ.ಪಾಟೀಲ್, ‘ತೀವ್ರ ಸ್ವರೂಪದ ಬರಗಾಲದ ಸಂದರ್ಭದಲ್ಲಿಯೂ ಮೋಡ ಬಿತ್ತನೆಯಂತಹ ವೈಜ್ಞಾನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳದೇ ಇರುವುದು ಅಜ್ಞಾನದ ಅಪರಾಧ’ ಎಂದು ಅಸಮಾಧಾನ ಹೊರಹಾಕಿದರಲ್ಲದೆ, ಜನರ ಅನುಕೂಲಕ್ಕಾಗಿ ಮೋಡ ಬಿತ್ತನೆ ತಾಂತ್ರಿಕತೆಯನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ಪ್ರತಿಪಕ್ಷಗಳ ಗೈರು ಹಾಜರಿಯ ಮಧ್ಯೆ ವಿಧಾನಸಭೆಯಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದ ಆಡಳಿತ ಪಕ್ಷದ ಸದಸ್ಯ ಪ್ರಕಾಶ್ ಕೆ.ಕೋಳಿವಾಡ ‘ಕರ್ನಾಟಕ ಮೋಡ ಬಿತ್ತನೆ ವಿಧೇಯಕ-2024’ ಖಾಸಗಿ ಸದಸ್ಯರ ವಿಧೇಯಕವನ್ನು ಮಂಡಿಸಿದರು.

ಬರ ಸ್ಥಿತಿಯನ್ನು ತಗ್ಗಿಸುವುದು, ಅಂತರ್ಜಲ ಮಟ್ಟ ಹೆಚ್ಚಿಸುವುದು, ಜಲಾಶಯದಲ್ಲಿನ ನೀರಿನ ಒಳಹರಿವು ವೃದ್ಧಿ, ನೀರಾವರಿ ಭೂಮಿಯ ವಿಸ್ತರಣೆ, ವಿದ್ಯುತ್ ಉತ್ಪಾದನೆಗೆ ವ್ಯಾಪಕ ಅವಕಾಶ ಮುಂತಾದ ಕಾರಣಗಳಿಗೆ ಮೋಡ ಬಿತ್ತನೆ ಅಗತ್ಯವಿದೆ. ಬರದಿಂದಾಗಿ ರಾಜ್ಯದಲ್ಲಿ 35ಸಾವಿರ ಕೋಟಿ ರೂ. ಅಧಿಕ ನಷ್ಟವಾಗಿದೆ.

ಮೋಡಬಿತ್ತನೆ ಮಾಡಿದರೆ ಶೇ.21 ರಿಂದ 46 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಬೆಳೆಹಾನಿಯ ಪ್ರಮಾಣವನ್ನು 7 ಸಾವಿರ ಕೋಟಿ ರೂ.ಗಳಿಗೆ ತಗ್ಗಿಸಬಹುದು. ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, 27 ವರ್ಷದಲ್ಲಿ 16 ವರ್ಷ ಬರ ಸ್ಥಿತಿ ಇದೆ. 1.10 ಕೋಟಿ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಮೋಡಬಿತ್ತನೆಯಿಂದಾಗಿ ಈ ಪರಿಸ್ಥಿತಿ ತಪ್ಪಿಸಬಹುದಾಗಿದೆ ಎಂದು ಪ್ರಕಾಶ್ ಕೋಳಿವಾಡ ವಿವರಿಸಿದರು.

ಬಳಿಕ ಮಾತನಾಡಿದ ಕಾಂಗ್ರೆಸ್‍ನ ಹಿರಿಯ ಸದಸ್ಯ ಟಿ.ಬಿ.ಜಯಚಂದ್ರ, ‘ಮೋಡ ಬಿತ್ತನೆ ಸಮಗ್ರವಾಗಿ ನಿರ್ವಹಣೆ ಮಾಡಬೇಕು. ಕೇಂದ್ರ ಸರಕಾರ ಮತ್ತು ನೆರೆಹೊರೆಯ ನಾಲ್ಕೈದು ರಾಜ್ಯಗಳು ಒಳಗೊಂಡು ಚರ್ಚೆ ಮಾಡಿ ಬಲವಾದ ಮೋಡಗಳಿರುವ ವೇಳೆ ಮೋಡ ಬಿತ್ತನೆ ಮಾಡಿದರೆ ಯಶಸ್ವಿಯಾಗುತ್ತದೆ. ವಿಜ್ಞಾನವು ಇದನ್ನು ಒಪ್ಪಿಕೊಂಡಿದೆ ಎಂದು ನುಡಿದರು.

ಇದಕ್ಕೆ ಉತ್ತರ ನೀಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ಮೋಡ ಬಿತ್ತನೆ ತಾಂತ್ರಿಕತೆ ಬಳಕೆ ಅಗತ್ಯ. ಖಾಸಗಿ ವಿಧೇಯಕವನ್ನು ಸರಕಾರವಾಗಿ ಒಪ್ಪುವುದು ಕಷ್ಟಸಾಧ್ಯ. ಅದನ್ನು ಜಂಟಿ ಸದನ ಸಮಿತಿ ಅಥವಾ ಆಯ್ಕೆ ಸಮಿತಿಗೆ ಕಳುಹಿಸುವುದಾಗಿ ಹೇಳಲಾಗುತ್ತದೆ. ಅಥವಾ ಪರಿಶೀಲಿಸುತ್ತೇವೆ ಎಂದು ಸಬೂಬು ಹೇಳಲಾಗುತ್ತದೆ. ಆದರೆ ತಾಂತ್ರಿಕವಾಗಿ ಸಾಕಷ್ಟು ಅಡಚಣೆಗಳೂ ಇವೆ. ಆರ್ಥಿಕ ಹೊರೆ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಬೇಕಾಗುತ್ತದೆ. ಅದೆಲ್ಲದರ ಹೊರತಾಗಿ ಮೋಡಬಿತ್ತನೆಯ ವಿಧೇಯಕವನ್ನು ರಾಜ್ಯಪಾಲರಿಗೆ ಕಳುಹಿಸಲು ನನ್ನ ಸಹಮತ ಇದೆ ಎಂದು ಪಾಟೀಲ್ ಸ್ಪಷ್ಟಪಡಿಸಿದರು.

ಆ ಬಳಿಕ ಸ್ಪೀಕರ್ ಪೀಠದಲ್ಲಿದ್ದ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು, ಖಾಸಗಿ ವಿಧೇಯಕವನ್ನು ರಾಜ್ಯಪಾಲರ ಒಪ್ಪಿಗೆಗೆ ರವಾನಿಸಲು ಈ ಸದನ ಒಪ್ಪಿಗೆ ನೀಡಿದೆ ಎಂದು ರೂಲಿಂಗ್ ನೀಡಿದರು.

Leave A Reply

Your email address will not be published.