EBM News Kannada
Leading News Portal in Kannada

ನಿವೃತ್ತ ಐಎಎಸ್ ಅಧಿಕಾರಿ, ನಟ ಕೆ. ಶಿವರಾಂ ನಿಧನ

0


ಬೆಂಗಳೂರು : ನಿವೃತ್ತ ಐಎಎಸ್ ಅಧಿಕಾರಿ, ನಟ ಹಾಗೂ ಬಿಜೆಪಿ ಮುಖಂಡ ಕೆ. ಶಿವರಾಂ ಅವರು ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

ಫೆ.28ರ ಬುಧವಾರ ಕೆ.ಶಿವರಾಮ್ ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ಗುರುವಾರ ಸಂಜೆ 4.15ರ ಸುಮಾರಿಗೆ ಮೃತಪಟ್ಟಿದ್ದಾರೆ. ನಾಳೆ(ಮಾ.1) ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಶಿವರಾಂ ಅವರ ಅಳಿಯ ಪ್ರದೀಪ್ ಮಾಹಿತಿ ನೀಡಿದ್ದಾರೆ.

ಹಿನ್ನೆಲೆ: ಕೆ.ಶಿವರಾಮ್ ಅವರು ರಾಮನಗರ ಜಿಲ್ಲೆಯ ಬಿಡದಿ ಬಳಿಯ ಉರಗಳ್ಳಿ ಗ್ರಾಮದಲ್ಲಿ ಎಪ್ರಿಲ್ 6, 1953ರಂದು ಜನಿಸಿದ್ದರು. ಬೆಂಗಳೂರಿನ ಮಲ್ಲೇಶ್ವರಂ ಸರಕಾರಿ ಶಾಲೆಯಲ್ಲಿ ಪ್ರೌಢಶಿಕ್ಷಣ, ವಿ.ವಿ.ಪುರಂ ಸಂಜೆ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬಿ.ಎ, 1982ರಲ್ಲಿ ಮೈಸೂರಿನ ಮುಕ್ತ ವಿವಿಯಿಂದ ಎಂ.ಎ (ಇತಿಹಾಸ) ಪದವಿ ಪಡೆದಿದ್ದರು.

1972ರಲ್ಲಿ ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಟೈಪಿಂಗ್ ಮತ್ತು ಶೀಘ್ರ ಲಿಪಿ ಕೋರ್ಸ್ ಪೂರ್ಣಗೊಳಿಸಿದ್ದರು. ಮೇ 1973ರಲ್ಲಿ ಅಪರಾಧ ತನಿಖಾ ಇಲಾಖೆಯಲ್ಲಿ ಸರಕಾರಿ ಉದ್ಯೋಗ ಪಡೆದಿದ್ದ ಕೆ.ಶಿವರಾಮ್ ಅವರು, ಸೇವೆಯಲ್ಲಿದ್ದಾಗಲೇ ತಮ್ಮ ಅಧ್ಯಯನ ಮುಂದುವರೆಸಿ 1985ರಲ್ಲಿ ಕೆಎಎಸ್ ಪರೀಕ್ಷೆ ಬರೆದು ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆಯ್ಕೆಯಾಗಿದ್ದರು.

1986ರಲ್ಲಿ ಕರ್ನಾಟಕ ಆಡಳಿತ ಸೇವಾ ಪರೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯದಲ್ಲಿ ಮೊದಲನೆ ರ್ಯಾಂಕ್ ಪಡೆದು ಸಹಾಯಕ ಪೊಲೀಸ್ ಆಯುಕ್ತರಾಗಿದ್ದರು. ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾಗಲೇ ನಾಗರಿಕ ಸೇವಾ ಪರೀಕ್ಷೆಯನ್ನು ಕನ್ನಡದಲ್ಲೇ ಬರೆದು ತೇರ್ಗಡೆ ಹೊಂದಿದ್ದರು. ಕನ್ನಡ ಭಾಷೆಯಲ್ಲಿ ಐಎಎಸ್ ಪರೀಕ್ಷೆ ಬರೆದು ತೇರ್ಗಡೆಯಾದ ರಾಜ್ಯದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ತದನಂತರ ರಾಜ್ಯದ ವಿವಿಧೆಡೆ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

2013ರಲ್ಲಿ ಐಎಎಸ್ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದ ಅವರು, ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದ್ದರು. ಆದರೆ, ಕೆಲವು ತಿಂಗಳಲ್ಲೇ ಪಕ್ಷ ತೊರೆದು ಜೆಡಿಎಸ್ ಸೇರಿದ್ದರು. 2014ರಲ್ಲಿ ವಿಜಯಪುರದಿಂದ ಲೋಕಸಭೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು. ತದನಂತರ, ಮತ್ತೆ ಕಾಂಗ್ರೆಸ್‍ಗೆ ಮರಳಿದ್ದ ಅವರು, 2014ರ ಅಕ್ಟೋಬರ್ ನಲ್ಲಿ ಕಾಂಗ್ರೆಸ್‍ನಿಂದಲೂ ಹೊರಬಂದು ಬಿಜೆಪಿಗೆ ಸೇರ್ಪಡೆ ಆಗಿದ್ದರು.

ಅಲ್ಲದೆ ಕೆ.ಶಿವರಾಮ್ ಅವರು ದಲಿತ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಅವರು ಛಲವಾದಿ ಮಹಾಸಭಾ ಅಧ್ಯಕ್ಷರಾಗಿದ್ದರು. ಈ ನಡುವೆ ಅವರು ಸಿನಿಮಾರಂಗವನ್ನೂ ಪ್ರವೇಶಿಸಿ ‘ಬಾ ನಲ್ಲೆ ಮಧುಚಂದ್ರಕೆ, ವಸಂತ ಕಾವ್ಯ, ಸಾಂಗ್ಲಿಯಾನ-3, ಪ್ರತಿಭಟನೆ, ಖಳನಾಯಕ, ಯಾರಿಗೆ ಬೇಡ ದುಡ್ಡು, ಗೇಮ್ ಫಾರ್ ಲವ್’, ನಾಗಾ, ಓ ಪ್ರೇಮ ದೇವತೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು.

ಕೆ.ಶಿವರಾಮ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಚಿತ್ರನಟ ಶಿವರಾಜ್‍ಕುಮಾರ್ ಸೇರಿದಂತೆ ಹಲವರು ಗಣ್ಯರು ಸಂತಾಪ ಸೂಚಿಸಿದ್ದಾರೆ.

Leave A Reply

Your email address will not be published.