EBM News Kannada
Leading News Portal in Kannada

ಏಷ್ಯಾದಲ್ಲೇ ಕರ್ನಾಟಕವನ್ನು ಮುಂಚೂಣಿಗೆ ಕೊಂಡೊಯ್ಯುವ ಗುರಿ: ಸಿಎಂ ಸಿದ್ದರಾಮಯ್ಯ

0ಬೆಂಗಳೂರು, ಆ.15: ಭವಿಷ್ಯದ ತಂತ್ರಜ್ಞಾನ ಹಾಗೂ ಅತ್ಯಾಧುನಿಕ ಉತ್ಪಾದನಾ ವಲಯದಲ್ಲಿ ಸಮಾನ ಹಾಗೂ ಸುಸ್ಥಿರ ಬೆಳವಣಿಗೆಯ ಮೂಲಕ ಕರ್ನಾಟಕವನ್ನು ಏಷ್ಯಾದಲ್ಲೇ ಮೊದಲ ಸ್ಥಾನಕ್ಕೆ ಒಯ್ಯುವ ಗುರಿ ನಮ್ಮದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಂಗಳವಾರ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 77ನೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿ ಮಾತನಾಡಿದ ಅವರು, ಸಂಪತ್ತಿನ ಸಂಗ್ರಹ ಮತ್ತು ಹಂಚಿಕೆ ಹಾಗೂ ಮರುಹಂಚಿಕೆಗಳಲ್ಲಿ ಸಾಮಾಜಿಕ ನ್ಯಾಯವನ್ನು ಪಾಲಿಸುತ್ತಿದ್ದೇವೆ. ಅದಕ್ಕಾಗಿಯೆ ನಾವು ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಯುವನಿಧಿ ಎಂಬ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಅರ್ಥಶಾಸ್ತ್ರಜ್ಞ ಅಮತ್ರ್ಯ ಸೇನ್ ಅವರ ಪ್ರಮೇಯವಾದ ಅಭಿವೃದ್ಧಿಯೆ ಸ್ವಾತಂತ್ರ್ಯ ಎಂಬುದರಲ್ಲಿ ನಂಬಿಕೆಯಿಟ್ಟು ಈ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದ್ದೇವೆ ಎಂದರು.

ಕಳೆದ ಎರಡು ತಿಂಗಳಲ್ಲಿ ಫಾಕ್ಸ್‍ಕಾನ್ ಸೇರಿ ಹಲವು ಬ್ಯಾಟರಿ ಕಂಪೆನಿ, ಟಾಟಾ ಟೆಕ್ನಾಲಜೀಸ್ ಮತ್ತಿತರ ಕಂಪೆನಿಗಳಿಂದ ಗಣನೀಯ ಪ್ರಮಾಣದ ಹೂಡಿಕೆ ಆಕರ್ಷಿಸಲಾಗಿದೆ. ಹೂಡಿಕೆ ಆಕರ್ಷಣೆಯಲ್ಲಿ ಮುನ್ನಡೆ ಸಾಧಿಸುವ ನಿಟ್ಟಿನಲ್ಲಿ ಏರೋಸ್ಪೇಸ್ ಮತ್ತು ರಕ್ಷಣೆ, ಆಟೊಮೊಬೈಲ್, ವಿದ್ಯುತ್ ವಾಹನಗಳು, ಎಲೆಕ್ಟ್ರಾನಿಕ್ಸ್ ಮತ್ತು ಉತ್ಪಾದನಾ ವಲಯ, ಸ್ಟಾರ್ಟ್ ಆಪ್‍ಗಳು, ವಿವಿಧ ಸಂಘಟನೆಗಳು, ಮೂಲ ಸೌಕರ್ಯ ಅಭಿವೃದ್ಧಿ ವಲಯದ ಸಂಸ್ಥೆಗಳೊಂದಿಗೆ ನಿರಂತರ ಸಂವಾದ ನಡೆಸುತ್ತಿದ್ದೇವೆ. ಜಿಡಿಪಿ ವೇಗವರ್ಧನೆಗೆ ಸಂಬಂಧಿಸಿದಂತೆ ಏರೋಸ್ಪೇಸ್ ಮತ್ತು ಡಿಫೆನ್ಸ್, ಎಲೆಕ್ಟ್ರಾನಿಕ್ ಬಿಡಿಭಾಗಗಳು, ಕೋರ್ ಕೈಗಾರಿಕೆಗಳು ಮತ್ತು ವೇರ್ ಹೌಸಿಂಗ್ ಮತ್ತು ಲಾಜಿಸ್ಟಿಕ್ಸ್ ವಲಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಬೆಂಗಳೂರಿನಿಂದ ಹೊರಗೆ ಹೆಚ್ಚು ಉದ್ಯೋಗಾವಕಾಶ ಸೃಜಿಸುವ ಮೂಲಕ ಅಭಿವೃದ್ಧಿಗೆ ಉತ್ತೇಜನ ನೀಡಲು ಮತ್ತು ಸುಸ್ಥಿರ ಬದುಕು ರೂಪಿಸಲು ಸರಕಾರವು ಮಿಲಿಯನ್ ಪ್ಲಸ್ ನಗರಗಳೆಂದು ಗುರುತಿಸಲಾದ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರ್ಗಿ ಮತ್ತು ಬಳ್ಳಾರಿ ನಗರಗಳ ಉಪನಗರಗಳಾಗಿ ಕೈಗಾರಿಕಾ ಟೌನ್‍ಶಿಪ್‍ಗಳÀನ್ನು ಅಭಿವೃದ್ಧಿಪಡಿಸಲಿದೆ. ಕೈಗಾರಿಕೆಗಳ ಸ್ಥಾಪನೆಯನ್ನು ಕೇಂದ್ರವಾಗಿಸಿಕೊಂಡ ಈ ಉಪನಗರಗಳು ಸುಸ್ಥಿರತೆಯನ್ನು ಹೊಂದಿದ್ದು, ನಾಗರಿಕ ಸೌಲಭ್ಯಗಳು, ಶಾಲೆ, ಆರೋಗ್ಯ ಸೇವಾ ಸೌಲಭ್ಯಗಳನ್ನು ಸ್ಥಳೀಯವಾಗಿಯೇ ಒದಗಿಸಲಾಗುವುದು ಎಂದು ಹೇಳಿದರು.

ರಸ್ತೆ, ವಿಮಾನ ನಿಲ್ದಾಣ ಹಾಗೂ ಬಂದರುಗಳ ಅಭಿವೃದ್ಧಿಗೂ ಆಯವ್ಯಯದಲ್ಲಿ ಪ್ರಾಮುಖ್ಯತೆ ನೀಡಲಾಗಿದೆ. ರಾಜ್ಯದಲ್ಲಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳು ಹಾಗೂ ಪ್ರಗತಿಯಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಹೈದಾರಬಾದ್, ಕಲಬುರ್ಗಿ ಮತ್ತು ಚಳ್ಳಕೆರೆ ರಾಷ್ಟ್ರೀಯ ಹೆದ್ದಾರಿ ನಡುವೆ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಎಕ್ಸಪ್ರೆಸ್-ವೇ ನಿರ್ಮಿಸುವ ಮೂಲಕ ಕಲ್ಯಾಣ ಕರ್ನಾಟಕ ಮತ್ತು ಬೆಂಗಳೂರು ನಡುವಣ ರಸ್ತೆ ಸಂಪರ್ಕ ಇನ್ನಷ್ಟು ಉತ್ತಮ ಪಡಿಸಲಾಗುವುದು.

ನೀರಾವರಿ ಕ್ಷೇತ್ರದಲ್ಲಿ ರಾಜ್ಯಕ್ಕೆ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಹಂಚಿಕೆ ಮಾಡಿರುವ ಪ್ರತಿ ಹನಿ ನೀರನ್ನು ಬಳಸಿಕೊಳ್ಳಲು ನಾವು ತಯಾರಿದ್ದೇವೆ. ಇದಕ್ಕೆ ಅಗತ್ಯವಿರುವ ಸಂಪನ್ಮೂಲ ಕ್ರೋಢೀಕರಿಸಿ ವಿನಿಯೋಗಿಸುತ್ತೇವೆ. ನಮ್ಮ ಸರಕಾರವು ಪ್ರಾದೇಶಿಕ ಅಸಮಾನತೆ ನಿವಾರಿಸಿ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

“ಮನುಷ್ಯ ಜಾತಿ ತಾನೊಂದೆ ವಲಂ”

ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಸಿದ್ದರಾಮಯ್ಯ, ಇದು ಎಲ್ಲರ ಭಾರತ. ವೈವಿಧ್ಯತೆಯಲ್ಲಿ ಏಕತೆ ಎಂಬುದು ನಮ್ಮ ಮೂಲಮಂತ್ರ. ಇದನ್ನು ಪ್ರತಿ ಕ್ಷಣವೂ ನೆನಪಿಸಿಕೊಳ್ಳೋಣ. ಅಂತಿಮವಾಗಿ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಪಂಪನ ಮಾತುಗಳು ಸಮಸ್ತ ಜನಕೋಟಿಯ ಘೋಷ ವಾಕ್ಯವಾಗಲಿ ಎಂದು ಆಶಿಸುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ನುಡಿದರು.

ಮೆಟ್ರೋ ಮಾರ್ಗ ಮತ್ತಷ್ಟು ವಿಸ್ತರಣೆ

ಬೆಂಗಳೂರು ಮೆಟ್ರೋ ಪ್ರಸ್ತುತ 69.66 ಕಿ.ಮೀ. ಕಾರ್ಯಾಚರಣೆ ನಡೆಸುತ್ತಿದ್ದು, ಪ್ರತಿದಿನ 6.1 ಲಕ್ಷ ಪ್ರಯಾಣಿಕರು ಮೆಟ್ರೋ ರೈಲು ಸೇವೆಯನ್ನು ಪಡೆಯುತ್ತಿದ್ದಾರೆ. ಮುಂದಿನ ತಿಂಗಳು ಬೈಯಪ್ಪನಹಳ್ಳಿ-ಕೃಷ್ಣರಾಜಪುರ ಮಾರ್ಗ, ಕೆಂಗೇರಿ-ಚಲ್ಲಘಟ್ಟ ವಿಸ್ತರಣೆ, ಡಿಸೆಂಬರ್ ವೇಳೆಗೆ ನಾಗಸಂದ್ರ-ಮಾದಾವರ ವಿಸ್ತರಣೆ, ಆರ್.ವಿ.ರಸ್ತೆ-ಬೊಮ್ಮನಹಳ್ಳಿ ಹೊಸಮಾರ್ಗ ಕಾರ್ಯಾಚರಣೆ ಪ್ರಾರಂಭಿಸಲಾಗುವುದು. 2026ರ ವೇಳೆಗೆ ಬೆಂಗಳೂರಿನಲ್ಲಿ 175.55 ಕಿ.ಮೀ. ಮೆಟ್ರೋ ಜಾಲ ಕಾರ್ಯಾಚರಣೆ ನಡೆಸಲಿದೆ ಎಂದರು.

ಶಿಕ್ಷಣ ಕ್ಷೇತ್ರಕ್ಕೆ ಅನುದಾನ..!

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ನಮ್ಮ ಸರಕಾರ ಆದ್ಯತೆ ನೀಡಿದೆ. ಶಾಲಾ ಕೊಠಡಿಗಳ ನಿರ್ಮಾಣ, ದುರಸ್ತಿಗೆ 650 ಕೋಟಿ ರೂ. ಹಾಗೂ ಶಾಲೆ, ಕಾಲೇಜುಗಳಲ್ಲಿ ಶೌಚಾಲಯ ನಿರ್ಮಾಣವನ್ನು ಕೈಗೊಳ್ಳಲು 200 ಕೋಟಿ ರೂ. ಒದಗಿಸಲಾಗಿದೆ. ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ವಾರಕ್ಕೆ ಎರಡು ದಿನ ಮೊಟ್ಟೆ ಕೊಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

ಹೈನುಗಾರಿಕೆಗೆ ಉತ್ತೇಜನ

ಹೈನುಗಾರಿಕೆಯನ್ನು ಉತ್ತೇಜಿಸಿ ಗ್ರಾಮೀಣ ಆರ್ಥಿಕತೆಗೆ ಚೈತನ್ಯ ನೀಡುವ ಉದ್ದೇಶದಿಂದ ಪ್ರತಿ ಲೀಟರ್ ಹಾಲಿಗೆ 3 ರೂಪಾಯಿಗಳಷ್ಟು ಮೊತ್ತವನ್ನು ಹೆಚ್ಚುವರಿಯಾಗಿ ರೈತರಿಗೆ ನೀಡಲಾಗುತ್ತಿದೆ. ಇದರ ಜೊತೆಗೆ ಕೃಷಿ ಕ್ಷೇತ್ರದ ಬಲವರ್ಧನೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Leave A Reply

Your email address will not be published.