ಸಮಂತಾ ಹೆಸರಲ್ಲಿ ಇಡ್ಲಿ ಹೋಟೆಲ್ ತೆರೆಯುವ ಯೋಚನೆ ಮಾಡಿದ್ದ ವಿಜಯ್ ದೇವರಕೊಂಡ: ಕಾರಣ? – Kannada News | Vijay Deverakonda Planed To Start Idli Hotel In the name of Samantha
Vijay Deverakonda-Samantha: ನಟಿ ಸಮಂತಾ ಹೆಸರಲ್ಲಿ ಇಡ್ಲಿ ಹೋಟೆಲ್ ತೆರೆಯುವ ಯೋಚನೆ ಮಾಡಿದ್ದರಂತೆ ನಟ ವಿಜಯ್ ದೇವರಕೊಂಡ! ಕಾರಣವೇನು?
ಸಮಂತಾ-ವಿಜಯ್
ನಟ ವಿಜಯ್ ದೇವರಕೊಂಡ (Vijay Deverakonda) ತೆಲುಗಿನ ಸ್ಟಾರ್ ಯುವನಟರಲ್ಲೊಬ್ಬರು. ‘ಅರ್ಜುನ್ ರೆಡ್ಡಿ’ ಸಿನಿಮಾದ ಮೂಲಕ ಭಾರಿ ದೊಡ್ಡ ವಿಜಯ ದಾಖಲಿಸಿ ಅದಾದ ಬಳಿಕ ಕೆಲವು ಸಿನಿಮಾಗಳಲ್ಲಿ ಆ ಯಶಸ್ಸನ್ನು ಮುಂದುವರೆಸಿಕೊಂಡು ಬಂದಿದ್ದ ವಿಜಯ್ ದೇವರಕೊಂಡಗೆ ‘ಲೈಗರ್’ ಸಿನಿಮಾ ಭಾರಿ ಪೆಟ್ಟುಕೊಟ್ಟಿದೆ. ‘ಲೈಗರ್‘ (Liger) ಸಿನಿಮಾದ ಸೋಲಿನ ಬಳಿಕ ಹಲವರು ವಿಜಯ್ ದೇವರಕೊಂಡ ಸಮಯ ಮುಗಿಯಿತೆಂದೇ ಮಾತನಾಡಿದ್ದರು. ಅದಕ್ಕೆ ತಕ್ಕಂತೆ ‘ಲೈಗರ್’ ಸೋಲಿನ ನಂತರ ಆರಂಭಿಸಿದ್ದ ‘ಖುಷಿ‘ (Khushi) ಸಿನಿಮಾ ಸಹ ಹಲವು ಅಡೆ-ತಡೆಗಳನ್ನು ಕಂಡಿತು. ಆ ಸಂದರ್ಭದಲ್ಲಿ ಸಿನಿಮಾ ವೃತ್ತಿ ಬಿಟ್ಟು ಹೋಟೆಲ್ ಇಡುವ ಆಲೋಚನೆ ಮಾಡಿದ್ದರಂತೆ ವಿಜಯ್ ದೇವರಕೊಂಡ!
‘ಖುಷಿ’ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇಂದು (ಆಗಸ್ಟ್ 09) ಹೈದರಾಬಾದ್ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ವಿಜಯ್ ದೇವರಕೊಂಡ, ‘ಖುಷಿ’ ಸಿನಿಮಾಕ್ಕೆ ಎದುರಾದ ಅಡೆ-ತಡೆಗಳ ಕಾರಣದಿಂದಾಗಿ ಒಮ್ಮೆಯಂತೂ ತಾವು ವಿಜಯವಾಡ ಹೈವೇಯಲ್ಲಿ ಇಡ್ಲಿ ಹೋಟೆಲ್ ತೆರೆಯಲು ನಿಶ್ಚಯಿಸಿದ್ದೆ ಎಂದರು. ಅಲ್ಲದೆ ಆ ಹೋಟೆಲ್ಗೆ ಸಮಂತಾ ಹೆಸರೇ ಇಡಲು ನಿಶ್ಚಯಿಸಿದ್ದಾಗಿಯೂ ತಮಾಷೆಯಾಗಿ ತಿಳಿಸಿದ್ದರು.
‘ಖುಷಿ’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಸಮಂತಾಗೆ ತೀವ್ರ ಅನಾರೋಗ್ಯ ಎದುರಾಗಿತ್ತು. ಸಿನಿಮಾದ ಮೊದಲ ಶೆಡ್ಯೂಲ್ ಚಿತ್ರೀಕರಣ ಮುಗಿದಿತ್ತು. ಎರಡನೇ ಶೆಡ್ಯೂಲ್ ಚಿತ್ರೀಕರಣ ಬಾಕಿ ಇದ್ದಾಗ ಸಮಂತಾಗೆ ಅನಾರೋಗ್ಯ ಎದುರಾಯ್ತು. ಅದರಿಂದಾಗಿ ಚಿತ್ರೀಕರಣ ಬಂದ್ ಆಯ್ತು, ಸಮಂತಾ ಚೇತರಿಸಿಕೊಂಡು ಬಂದ ಬಳಿಕವೂ ‘ಖುಷಿ’ ಬದಲಿಗೆ ಬೇರೆ ಸಿನಿಮಾಗಳ ಚಿತ್ರೀಕರಣ, ಪ್ರಚಾರದಲ್ಲಿ ಪಾಲ್ಗೊಳ್ಳಬೇಕಾಗಿ ಬಂತು. ಹಾಗಾಗಿ ‘ಖುಷಿ’ ಸಿನಿಮಾದ ಚಿತ್ರೀಕರಣ ಅಂದುಕೊಂಡಿದ್ದಕ್ಕಿಂತಲೂ ಬಹಳ ತಡವಾಯ್ತು.
ಈ ಬಗ್ಗೆ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್ ದೇವರಕೊಂಡ, ”ಒಂದು ಹಂತದ ಚಿತ್ರೀಕರಣ ಮಾಡಿಬಿಟ್ಟಿದ್ದೆವು, ಎರಡನೇ ಹಂತದ ಚಿತ್ರೀಕರಣ ಮಾಡುವುದಿತ್ತು, ಆಗ ಸಮಂತಾರಿಂದಾಗಿ ಚಿತ್ರೀಕರಣ ನಿಲ್ಲಿಸುವಂತಾಯ್ತು. ಆಗಂತೂ ಮತ್ತೆ ಚಿತ್ರೀಕರಣ ಯಾವಾಗ ಶುರು ಆಗುತ್ತದೆ ಎಂಬುದು ಸಹ ನಮಗೆ ಗೊತ್ತಿರಲಿಲ್ಲ. ವರ್ಷಗಳ ಕಾಲ ಚಿತ್ರೀಕರಣ ಶುರು ಆಗಲಿಲ್ಲವೆಂದರೆ ಏನು ಮಾಡಬೇಕು ಎಂದು ಗೊತ್ತಿರಲಿಲ್ಲ. ಸಿನಿಮಾ ಶೂಟಿಂಗ್ ಹೇಗೋ ನಡೆಯುತ್ತಿಲ್ಲ ಫ್ರೀ ಟೈಮ್ ಬೇರೆ ಇದೆ, ಸುಮ್ಮನೆ ವಿಜಯವಾಡ ಹೈವೇಯಲ್ಲಿ ಇಡ್ಲಿ ಹೋಟೆಲ್ ಒಂದನ್ನು ಇಡೋಣ, ಅದಕ್ಕೆ ಸಮಂತಾ ಇಡ್ಲಿ ಹೋಟೆಲ್ ಎಂದು ಹೆಸರಿಡೋಣ ಎಂದು ನಾನು ನಿರ್ದೇಶಕರು ಮಾತನಾಡಿಕೊಂಡಿದ್ದೆವು” ಎಂದು ತಮಾಷೆ ಮಾಡಿದರು.
”ಈಗ ಒಂದು ಹಂತದ ಚಿತ್ರೀಕರಣ ಮುಗಿಸಿದ್ದೇವೆ, ಸಮಂತಾಗೆ ಆರೋಗ್ಯ ಸರಿ ಹೋಗದೇ ಚಿತ್ರೀಕರಣ ಬಹಳ ತಡವಾದರೆ, ಹತ್ತು ವರ್ಷದ ಬಳಿಕ ಮತ್ತೆ ಇದೇ ಸಿನಿಮಾದ ಮುಂದುವರೆದ ಭಾಗ ಚಿತ್ರೀಕರಣ ಮಾಡಿ ಎರಡನ್ನೂ ಸೇರಿಸಿ ಬಿಡುಗಡೆ ಮಾಡೋಣ, ಪ್ರೀತಿಸಿದಾಗ ಹೀಗಿದ್ದರು ಮದುವೆಯಾಗಿ ಹತ್ತು ವರ್ಷದ ಬಳಿಕ ಹೀಗಿದ್ದಾರೆ ಎಂದು ತೋರಿಸೋಣ ಎಂದೂ ನಾವೂ ಯೋಚನೆ ಮಾಡಿದ್ದೆವು ಎಂದರು ವಿಜಯ್ ದೇವರಕೊಂಡ.