ಇಬ್ಬರ ಜಗಳಕ್ಕೆ ಕಾರಣವಾಗಿದೆ ಆಲಿಯಾ ಭಟ್ ಮೆಹಂದಿ: ಏನಿದು ವಿವಾದ? – Kannada News | Alia Bhatt’s Mehandi in Rocky Aur Rani Ki Prem Kahani Starts Controversy
ಆಲಿಯಾ ಭಟ್ ತಮ್ಮ ಮದುವೆಯ ದಿನ ಹಾಕಿಸಿಕೊಂಡಿದ್ದ ಮೆಹಂದಿ ಡಿಸೈನ್ ಈಗ ವಿವಾದಕ್ಕೆ ಕಾರಣವಾಗಿದೆ! ಏನಿದು ವಿವಾದ? ಇಲ್ಲಿ ತಿಳಿಯಿರಿ…
ಆಲಿಯಾ ಭಟ್
ಆಲಿಯಾ ಭಟ್ (Alia Bhatt) ಮದುವೆಯಾಗಿ (Marriage) ಮುದ್ದಾದ ಹೆಣ್ಣು ಮಗುವಿನ ತಾಯಿಯೂ ಆಗಿದ್ದಾರೆ. ಆದರೆ ಈಗ ಆಲಿಯಾ ಭಟ್ ಮದುವೆಯ ಸಮಯದಲ್ಲಿ ಹಾಕಿಸಿಕೊಂಡಿದ್ದ ಮೆಹಂದಿ ವಿವಾದಕ್ಕೆ ಕಾರಣವಾಗಿದೆ. ಆಲಿಯಾ ಭಟ್ ಮೆಹಂದಿ (Mehandi) ಕುರಿತಾಗಿ ಇಬ್ಬರು ಕಲಾವಿದೆಯರು ಪರಸ್ಪರ ಜಗಳಕ್ಕೆ ಇಳಿದಿದ್ದಾರೆ. ಸದ್ಯಕ್ಕೆ ಇವರ ಜಗಳ ಮಾಧ್ಯಮಗಳಿಗೆ ನೀಡುತ್ತಿರುವ ಹೇಳಿಕೆಗಳಿಗಷ್ಟೆ ಸೀಮಿತವಾಗಿದೆ. ಬೀದಿ ರಂಪವಾಗಲಿ ಅಥವಾ ನ್ಯಾಯಾಲಯದ ಮೆಟ್ಟಿಲಾಗಲಿ ಏರಿಲ್ಲ. ಹಾಗಿದ್ದರೆ ಏನಿದು ವಿವಾದ?
ಆಲಿಯಾ ಭಟ್ ನಟನೆಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ರಣ್ವೀರ್ ಸಿಂಗ್ ಜೊತೆಗೆ ಆಲಿಯಾ ಭಟ್ ಈ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಗೆಲುವು ಕಂಡಿದೆ. ಕೌಟುಂಬಿಕ ಕತೆಯನ್ನು ಒಳಗೊಂಡಿರುವ ಈ ಸಿನಿಮಾವನ್ನು ಕರಣ್ ಜೋಹರ್ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಮದುವೆ, ಹಬ್ಬ ಆಚರಣೆ ಹೀಗೆ ಅನೇಕ ಸೆಲೆಬ್ರೇಟ್ ಮಾಡುವ ಸನ್ನಿವೇಶಗಳಿವೆ. ಆಲಿಯಾ ಹಾಗೂ ರಣ್ವೀರ್ ಸಿಂಗ್ರ ಮದುವೆ ಸನ್ನಿವೇಶವೂ ಇದೆ.
ಸಿನಿಮಾದ ಮದುವೆಯ ದೃಶ್ಯದಲ್ಲಿ ಆಲಿಯಾ ಭಟ್ ಕೈಗೆ ಹಾಕಿಕೊಂಡಿರುವ ಮೆಹಂದಿ ಈಗ ವಿವಾದಕ್ಕೆ ಕಾರಣವಾಗಿದೆ. ಸಿನಿಮಾದಲ್ಲಿ ಆಲಿಯಾ ಭಟ್ ಹಾಕಿಕೊಂಡಿರುವ ಮೆಹಂದಿ, ಆಲಿಯಾ ಭಟ್ ಮದುವೆಗೆ ಹಾಕಿಕೊಂಡಿದ್ದ ಮೆಹಂದಿಯೇ ಆಗಿದೆ. ಆಲಿಯಾರ ಮದುವೆಯ ಮೆಹಂದಿ ಡಿಸೈನ್ ಅನ್ನೇ ಸಿನಿಮಾದ ಚಿತ್ರೀಕರಣಕ್ಕೂ ಬಳಸಿಕೊಳ್ಳಲಾಗಿತ್ತು. ಆದರೆ ಈಗ ಆಲಿಯಾರ ಮದುವೆಗೆ ಮೆಹಂದಿ ಹಾಕಿದ್ದ ಕಲಾವಿದೆ ಈ ಬಗ್ಗೆ ತಕರಾರು ತೆಗೆದಿದ್ದಾರೆ.
ಸಿನಿಮಾದಲ್ಲಿ ಆಲಿಯಾರಿಗೆ ಮೆಹಂದಿ ಹಾಕಿದ್ದ ವೀಣಾ ನಗ್ಡ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿ, ”ಮದುವೆಗೆ ಹಾಕಲಾಗಿದ್ದ ಮೆಹಂದಿಯ ಕೆಲ ಭಾಗವನ್ನು ಉಳಿಸಿಕೊಂಡು ಅದರ ಮೇಲೆ ಬಣ್ಣದಿಂದ ತಿದ್ದಿದ್ದೇವೆ. ಆದರೆ ನಾವು ಮುಂಗೈನಿಂದ ಮೊಣಕೈ ವರೆಗೆ ಹೊಸ ಡಿಸೈನ್ ಹಾಕಿದ್ದೇವೆ ಅಲ್ಲದೆ ಬೆರಳುಗಳಿಗೂ ಮೂಲ ಡಿಸೈನ್ ಉಳಿಸಿಕೊಳ್ಳದೆ ಬೇರೆ ಡಿಸೈನ್ ಹಾಕಿದ್ದೇವೆ, ಆ ಮೂಲಕ ಹೊಸ ಲುಕ್ ಅನ್ನು ಮೆಹಂದಿಗೆ ನೀಡಿದ್ದೇವೆ” ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಲಿಯಾ ಭಟ್ರಿಗೆ ಮದುವೆಯಂದು ಮೆಹಂದಿ ಹಾಕಿದ್ದ ಕಲಾವಿದೆ ಜ್ಯೋತಿ ಚಡ್ಡಾ, ”ಮೂಲ ಮೆಹಂದಿಗೆ ಮೆರುಗು ತುಂಬುವ ಕಾರ್ಯವನ್ನು ಚೆನ್ನಾಗಿ ಮಾಡಿದ್ದಾರೆ. ಆದರೆ ಈಗ ಮಾಡಿರುವ ಮೆಹಂದಿ ಕಲೆಗೆ ನಾನು ಆಗ ಮಾಡಿದ್ದ ಮೆಹಂದಿಯನ್ನು ಬ್ಲೂ ಪ್ರಿಂಟ್ ಅನ್ನಾಗಿ ಬಳಸಿಕೊಳ್ಳಲಾಗಿದೆ. ನನ್ನ ಕಲೆಯನ್ನು ಆಧಾರವಾಗಿಟ್ಟುಕೊಂಡು ಅವರು ತಮ್ಮ ಕಲಾಪ್ರದರ್ಶನ ಮಾಡಿದ್ದಾರೆ. ಹೀಗಿದ್ದಾಗ ಮೂಲ ಕಲೆಗಾರರನ್ನು ಗುರುತಿಸುವ ಸೌಜನ್ಯವನ್ನು ಅವರು ತೋರಿಲ್ಲ” ಎಂದಿದ್ದಾರೆ. ಸದ್ಯಕ್ಕೆ ಈ ವಿವಾದ ಮಾತುಗಳಷ್ಟರಲ್ಲೇ ಇದೆ, ನ್ಯಾಯಾಲಯದ ಮೆಟ್ಟಿಲನ್ನೂ ಏರುತ್ತದೆಯೇ ಕಾದು ನೋಡಬೇಕಿದೆ.