ಭಯೋತ್ಪಾದನೆ, ಮೂಲಭೂತವಾದ ತಡೆಗೆ ಭಾರತ, ಇಯು ಒಗ್ಗೂಡುವಂತೆ ರಾಷ್ಟ್ರಪತಿ ಕರೆ
ಅಥೆನ್ಸ್ : ಭಯೋತ್ಪಾದನೆ, ಉಗ್ರಗಾಮಿತ್ವವನ್ನು ತಡೆಯುವ ನಿಟ್ಟಿನಲ್ಲಿ ಭಾರತ ಹಾಗೂ ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳು ಪರಸ್ಪರ ಒಗ್ಗೂಡಿ ಕಾರ್ಯನಿರ್ವಹಿಸುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರೆ ನೀಡಿದ್ದಾರೆ.
ಗ್ರೀಸ್ ಪ್ರವಾಸದಲ್ಲಿರುವ ರಾಮನಾಥ್ ಕೋವಿಂದ್ ಅಥೆನ್ಸ್ ನಲ್ಲಿಂದು ರಾಯಬಾರಿಗಳು, ನೀತಿ ನಿರೂಪಕರ ಸಮ್ಮುಖದಲ್ಲಿ ವಿಶ್ವ ಬದಲಾವಣೆಯಲ್ಲಿ ಭಾರತ ಮತ್ತು ಯುರೋಪ್ ಪಾತ್ರ ವಿಷಯ ಕುರಿತಂತೆ ಮಾತನಾಡಿ, ಭಯೋತ್ಪಾದನೆ, ಮತ್ತು ಉಗ್ರಗಾಮಿತ್ವ ನಿರ್ಮೂಲನೆಗಾಗಿ ಜಾಗತಿಕ ರಾಷ್ಟ್ರಗಳು ಗಮನ ಹರಿಸುವಂತೆ ತಿಳಿಸಿದರು.
ಪೂರ್ವ ಯುರೋಪ್ ಹಾಗೂ ಪಶ್ಚಿಮ ಭಾರತ ಭಾಗದಲ್ಲಿನ ಆಸ್ಥಿರತೆ ಹಾಗೂ ಉಗ್ರಗಾಮಿತ್ವದಿಂದ ಉಭಯ ರಾಷ್ಟ್ರಗಳ ನಾಗರಿಕರು ಭೀತಿಗೊಂಡಿದ್ದಾರೆ. ಉಗ್ರ ಗುಂಪುಗಳಿಂದ ಹಣಕಾಸಿನ ಪೂರೈಕೆಯಿಂದ ಸೂಕ್ಷ್ಮ ಶಸ್ತ್ರಾಸ್ತ್ರಗಳು ಒಳನುಸುಳುತ್ತಿದ್ದು, ಭಯೋತ್ಪಾದನೆಯನ್ನು ಉತ್ತೇಜಿಸಲಾಗುತ್ತಿದೆ . ಇದು ಭಾರತದ ಮೇಲೆ ಮಾತ್ರವಲ್ಲ ಎಲ್ಲಾ ರಾಷ್ಟ್ರಗಳ ಮಾನವರ ಮೇಲೆ ಪರಿಣಾಮ ಬೀರಲಿದೆ ಎಂದರು.
ಉಗ್ರರಲ್ಲಿ ಕೆಟ್ಟವರು, ಒಳ್ಳೆಯರು ಎಂಬುದಿಲ್ಲ, ರಾಷ್ಟ್ರ ಪ್ರಚೋದಿತ ಭಯೋತ್ಪಾದನೆ ಅವಮಾನಕಾರ ಸಂಗತಿಯಾಗಿದ್ದು, ಜಾಗತಿಕ ಭಯೋತ್ಪಾದನೆ ನಿರ್ಮೂಲನೆ ಒಕ್ಕೂಟ , ಆರ್ಥಿಕ ಕ್ರಿಯಾ ಕಾರ್ಯಪಡೆಗಳ ಮೂಲಕ ಭಯೋತ್ಪಾದನೆ ನಿರ್ಮೂಲನೆಗೊಳಿಸಿ ಜಗತ್ತನ್ನು ರಕ್ಷಿಸಬೇಕಾಗಿದೆ ಎಂದು ಹೇಳಿದರು.
ಜಾಗತಿಕ ಶಾಂತಿಗಾಗಿ ಭಾರತ ಯಾವಾಗಲೂ ಬದ್ಧವಾಗಿದೆ. ಜಾಗತಿಕ ಹವಾಮಾನ ವೈಫರೀತ್ಯ ತಡೆ ನಿಟ್ಟಿನಲ್ಲಿ ಭಾರತ ಕಾರ್ಯನಿರ್ವಹಿಸುತ್ತಿದ್ದು, ವಿಶ್ವ ಶಾಂತಿಗಾಗಿ ಪ್ರಮುಖ ಕೊಡುಗೆ ನೀಡಿದೆ. ಇನ್ನಿತರ ಅಭಿವೃದ್ದಿ ಶೀಲ ರಾಷ್ಟ್ರಗಳಿಗೆ ಭಾರತ ಸಹಾಯ ನೀಡುತ್ತಿದ್ದು, ಸಮಾನ ರಾಷ್ಟ್ರ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಗ್ರೀಸ್, ಸುರೈನೇಮ್ ಮತ್ತು ಕ್ಯೂಬಾ ರಾಷ್ಟ್ರಗಳ ಪ್ರವಾಸದ ಅಂಗವಾಗಿ ಅಥೆನ್ಸ್ ನಲ್ಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಾಳೆ ಸುರೈನೇಮ್ ಗೆ ಪ್ರವಾಸ ಕೈಗೊಳ್ಳಲಿದ್ದಾರೆ.