ಸಮ್ಮಿಶ್ರ ಸರ್ಕಾರದ ಯೋಜನೆ ಜಾರಿಯಲ್ಲಿ ರೈತರ ಸಾಲಮನ್ನಾಗಿ ಪ್ರಾಧ್ಯಾನ್ಯತೆ: ಜೆಡಿಎಸ್ ಮೇಲುಗೈ
ಬೆಂಗಳೂರು: ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ(ಸಿಎಂಪಿ) ರೈತರ ಸಾಲಮನ್ನಾ ವಿಚಾರ ಪ್ರಮುಖವಾಗಿರಲಿದೆ.
ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಕರಡು ಸಮಿತಿಯಲ್ಲಿ ಐವರು ಸದಸ್ಯರಿದ್ದು ಕಾಂಗ್ರೆಸ್ ನ ಹಿರಿಯ ಮುಖಂಡ ವೀರಪ್ಪ ಮೊಯ್ಲಿ, ಆರ್ ವಿ ದೇಶಪಾಂಡೆ, ಡಿ.ಕೆ ಶಿವಕುಮಾರ್ ಮತ್ತು ಜೆಡಿಎಸ್ ನಾಯಕರಾದ ಹೆಚ್ ಡಿ ರೇವಣ್ಣ ಮತ್ತು ಬಂಡೆಪ್ಪ ಕಾಶೆಂಪುರ್ ಇದ್ದಾರೆ. ನಿನ್ನೆ ಸಮಿತಿಯ ಮೊದಲ ಸಭೆ ನಡೆಯಿತು. ಅದರಲ್ಲಿ ರೈತರ ಸಾಲಮನ್ನಾ ವಿಚಾರವನ್ನು ಪ್ರಮುಖವಾಗಿ ತೆಗೆದುಕೊಳ್ಳಬೇಕೆಂಬ ಪ್ರಸ್ತಾಪಕ್ಕೆ ಎಲ್ಲರೂ ಸಹಮತಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಎರಡೂ ಪಕ್ಷಗಳು ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಜೆಡಿಎಸ್ ನ ಆದ್ಯತೆಗಳಾದ ಮೂರು ಮುಖ್ಯ ವಿಷಯಗಳನ್ನು ಪ್ರಾಧಾನ್ಯತೆಯಾಗಿ ತೆಗೆದುಕೊಳ್ಳಲು ಹೆಚ್ ಡಿ ರೇವಣ್ಣ ದೃಢವಾಗಿ ನಿಂತರು. ರೈತರ ಸಾಲಮನ್ನಾ, ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಹೆರಿಗೆ ಭತ್ಯೆ ಮತ್ತು ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 6 ಸಾವಿರ ಮಾಸಿಕ ಪಿಂಚಣಿಯನ್ನು ನೀಡಬೇಕೆಂದು ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಸಲಾಯಿತು.
ರೈತರ ಸಾಲಮನ್ನಾವನ್ನು ಸೇರಿಸಲು ಸಮಿತಿ ಒಪ್ಪಿದರೆ ಮತ್ತೆ ಎರಡು ವಿಷಯಗಳ ಕುರಿತು ಇದೇ 25ರಂದು ನಡೆಯುವ ಸಭೆಯಲ್ಲಿ ವಿಸ್ತೃತವಾಗಿ ಸಮಿತಿ ಸದಸ್ಯರು ಚರ್ಚೆ ನಡೆಸಲಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೀರಪ್ಪ ಮೊಯ್ಲಿ, ರೈತರ ಸಾಲಮನ್ನಾ ವಿಚಾರವನ್ನು ಸಭೆಯಲ್ಲಿ ಪ್ರಾಮುಖ್ಯತೆ ವಿಷಯವನ್ನಾಗಿ ಪರಿಗಣಿಸಲಾಗಿದ್ದು ಮುಂದಿನ ಸಭೆಯಲ್ಲಿ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಘೋಷಿಸಿದ್ದ ಕೆಲವು ಅಭಿವೃದ್ಧಿ ಕಾರ್ಯಕ್ರಮಗಳು ಕೂಡ ಚರ್ಚೆಗೆ ಬರಲಿವೆ ಎಂದರು.