ಏರ್ ಇಂಡಿಯಾದ ಶೇ.100ರಷ್ಟು ಷೇರು ಮಾರಾಟಕ್ಕೆ ಸರ್ಕಾರ ಚಿಂತನೆ
ನವದೆಹಲಿ: ಸಾವಿರಾರು ಕೋಟಿ ರು. ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಖರೀದಿಗೆ ಯಾರೂ ಆಸಕ್ತಿ ತೋರಿಸದ ಹಿನ್ನೆಲೆಯಲ್ಲಿ ಇದೀಗ ಕೇಂದ್ರ ಸರ್ಕಾರ ಶೇ.100ರಷ್ಟು ಷೇರು ಮಾರಾಟಕ್ಕೆ ಚಿಂತನೆ ನಡೆಸಿದೆ.
ಏರ್ ಇಂಡಿಯಾ ಖಾಸಗೀಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಶೀಘ್ರದಲ್ಲಿಯೇ ಹೊಸ ಮಾರ್ಗದರ್ಶಿ ಸಿದ್ಧಪಡಿಸಲಿದ್ದು, ಕಳೆದ ತಿಂಗಳು ನಡೆಸಿದ ಯತ್ನ ವಿಫಲವಾಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಏರ್ ಇಂಡಿಯಾದ ಖಾಸಗೀಕರಣ ಪ್ರಕ್ರಿಯೆಯ ಬಗ್ಗೆ ಕೇಂದ್ರ ಸರ್ಕಾರ ಮರು ಪರಿಶೀಲಿಸಲಿದ್ದು, ಏರ್ ಇಂಡಿಯಾದಲ್ಲಿ ತನ್ನ ಷೇರುಗಳನ್ನು ಇಡಬೇಕೇ, ಬೇಡವೇ ಎಂಬುದರ ಬಗ್ಗೆ ಮರು ಪರಿಶೀಲಿಸಲಿದೆ ಎಂದು ಹಣಕಾಸು ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಅವರು ತಿಳಿಸಿದ್ದಾರೆ.
ಕೇಂದ್ರ ಸರಕಾರ ಏರ್ ಇಂಡಿಯಾದಲ್ಲಿ ಶೇ.24ರಷ್ಟು ಷೇರುಗಳನ್ನು ಇಟ್ಟುಕೊಂಡು, ಉಳಿದ ಷೇರುಗಳನ್ನು ಮಾರಾಟ ಮಾಡಲು ಯತ್ನಿಸಿತ್ತು. ಆದರೆ ಖರೀದಿದಾರರು ಮುಂದೆ ಬಂದಿರಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಶೇ.100ರಷ್ಟು ಷೇರುಗಳನ್ನೂ ಮಾರಾಟ ಮಾಡಲು ಚಿಂತನೆ ನಡೆಸಿದೆ.
ಕಳೆದ ಮೇ 31ರಂದು ಬಂಡವಾಳ ಹಿಂತೆಗೆತ ಪ್ರಕ್ರಿಯೆಗೆ ಚಾಲನೆ ನೀಡಿದರೂ, ಯಾರೊಬ್ಬ ಹೂಡಿಕೆದಾರರೂ ಮುಂದೆ ಬಂದಿರಲಿಲ್ಲ. ಹೀಗಾಗಿ ಇಡೀ ಪ್ರಕ್ರಿಯೆಗೆ ಭಾರಿ ಹಿನ್ನಡೆ ಉಂಟಾಗಿತ್ತು. ಇಂಡಿಗೊ ಏರ್‌ಲೈನ್ ಆರಂಭದಲ್ಲಿ ಏರ್ ಇಂಡಿಯಾ ಸ್ವಾಧೀನಪಡಿಸಿಕೊಳ್ಳಲು ಆಸಕ್ತಿ ವಹಿಸಿದರೂ, ನಂತರ ನಿರಾಸಕ್ತಿ ತೋರಿತ್ತು.
2017ರ ಮಾರ್ಚ್ ವೇಳೆಗೆ ಏರ್ ಇಂಡಿಯಾ 48,000 ಕೋಟಿ ರೂ. ಸಾಲವನ್ನು ಹೊಂದಿದೆ.