EBM News Kannada
Leading News Portal in Kannada

ಐಪಿಎಲ್ ವೀಕ್ಷಕರ ಪ್ರಮಾಣ ಶೇ.40ರಷ್ಟು ಏರಿಕೆ, ಆನ್ ಲೈನ್ ನಲ್ಲೇ 20 ಕೋಟಿ ವೀಕ್ಷಣೆ!

0

ಮುಂಬೈ: ಐಪಿಎಲ್ ಸೀಸನ್ 11 ಮುಕ್ತಾಯವಾಗಿದ್ದು, ಈ ಬಾರಿ ದಾಖಲೆ ಪ್ರಮಾಣದಲ್ಲಿ ವೀಕ್ಷಕರು ಟೂರ್ನಿ ವೀಕ್ಷಣೆ ಮಾಡಿದ್ದಾರೆ.
ಸ್ಟಾರ್ ಇಂಡಿಯಾ ಸಂಸ್ಥೆಯ ಪ್ರಕಾರ ಈ ಬಾರಿ ಐಪಿಎಲ್ ವೀಕ್ಷಣೆಯಲ್ಲಿ ಶೇ.40ರಷ್ಟು ವೀಕ್ಷಕರ ಪ್ರಮಾಣ ಹೆಚ್ಚಾಗಿದೆಯಂತೆ. ಒಟ್ಟು 60 ದಿನಗಳ ಕಾಲ ನಡೆದ ಟೂರ್ನಿಯನ್ನು ಭಾರತದ ಸುಮಾರು 700 ಮಿಲಿಯನ್ ವೀಕ್ಷಕರು ವೀಕ್ಷಣೆ ಮಾಡಿದ್ದಾರೆ. ಸ್ಟಾರ್ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಅನ್ವಯ ಕಳೆದ ಬಾರಿ ಐಪಿಎಲ್ ಸೀಸನ್ ಗೆ ಹೋಲಿಕೆ ಮಾಡಿದರೆ ಈ ಬಾರಿ ವೀಕ್ಷಕರ ಪ್ರಮಾಣದಲ್ಲಿ ಶೇ.40ರಷ್ಟು ಏರಿಕೆ ಕಂಡುಬಂದಿದೆ. ಆನ್ ಲೈನ್ ನಲ್ಲೇ ಸುಮಾರು 200 ಮಿಲಿಯನ್ ಮಂದಿ ಐಪಿಎಲ್ ವೀಕ್ಷಣೆ ಮಾಡಿದ್ದಾರೆ.

ಇನ್ನು ಕಳೆದ ಬಾರಿಯ ಸೀಸನ್ 10ಅನ್ನು ದೇಶಾದ್ಯಂತ ಸುಮಾರು 500 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದರು. ಆದರೆ ಇತ್ತೀಚೆಗೆ ಮುಕ್ತಾಯವಾದ ಸೀಸನ್ 11ಅನ್ನು ಬರೊಬ್ಬರಿ 700 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದಾರೆ. ಈ ಪೈಕಿ ಟಿವಿ ವೀಕ್ಷಕರ ಪ್ರಮಾಣದಲ್ಲೂ ಶೇ.25ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷ ಟಿವಿ ಮುಖಾಂತರ ಸುಮಾರು 400 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದರು.

ಇನ್ನು ಇದೇ ಮೊದಲ ಬಾರಿಗೆ ಟಿವಿ ಮತ್ತು ಆನ್ ಲೈನ್ ಸ್ಟ್ರೀಮಿಂಗ್ ಜಾಹಿರಾತು ಪ್ರಸಾರ ಹಕ್ಕುಗಳನ್ನು ಸ್ಟಾರ್ ಇಂಡಿಯಾ ಸಂಸ್ಥೆ ಜಂಟಿಯಾಗಿ ಮಾರಾಟ ಮಾಡಿದ್ದು, ವಿವೋ, ಕೋಕ್ ಸೇರಿದಂತೆ ಸುಮಾರು 125 ಜಾಹಿರಾತು ಸಂಸ್ಥೆಗಳು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದವು. ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಸ್ಚಾರ್ ಇಂಡಿಯಾ ಸಂಸ್ಥೆಯ ನಿರ್ವಾಹಕ ನಿರ್ದೇಶಕ ಸಂಜಯ್ ಗುಪ್ತಾ ಅವರು, ಸೋನಿ ಇಂಡಿಯಾ ಸಂಸ್ಥೆ ಈ ಹಿಂದೆ ಪಡೆದಿದ್ದ ಜಾಹಿರಾತು ಪ್ರಮಾಣಕ್ಕಿಂತಲೂ ಸ್ಟಾರ್ ಇಂಡಿಯಾ ಸಂಸ್ಥೆ ಪಡೆದರುವ ಜಾಹಿರಾತು ಪ್ರಮಾಣದಲ್ಲಿ ಶೇ.50 ಹೆಚ್ಚಳ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ಅಂತೆಯೇ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಟಿವಿ ಮತ್ತು ಆನ್ ಲೈನ್ ಸ್ಟ್ರೀಮಿಂಗ್ ಜಾಹಿರಾತುಗಳ ಪ್ರಮಾಣ ಕಡಿಮೆ ಇದೆ. ಮುಂದಿನ ಐದು ವರ್ಷಗಳಲ್ಲಿ ಈ ಪ್ರಮಾಣವನ್ನು ಹೆಚ್ಚಳ ಮಾಡಲಿದ್ದೇವೆ. ಪ್ರಸ್ತುತ ದೊರೆಯುತ್ತಿರುವ ಜಾಹಿರಾತು ಪ್ರಮಾಣ ಉತ್ತಮವಾಗಿದ್ದರೂ, ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಈ ಪ್ರಮಾಣ ತೀರಾ ಕಡಿಮೆ ಎಂದು ಸಜಯ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

Leave A Reply

Your email address will not be published.