ಲಾಕ್ ಡೌನ್ ಹಿನ್ನಲೆ: ಡೀಲರ್ಸ್‌ಗಳ ಸಹಾಯಕ್ಕೆ ಧಾವಿಸಿದ ಆಟೋ ಉತ್ಪಾದನಾ ಕಂಪನಿಗಳು
ಕರೋನಾ ವೈರಸ್ ತಡೆಗಾಗಿ ಕೇಂದ್ರ ಸರ್ಕಾರವು 21 ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿರುವುದರಿಂದ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ಬಂದ್ ಆಗಿದ್ದು, ಆಟೋ ಉತ್ಪಾದನಾ ವಲಯವು ಸಹ ಭಾರೀ ಪ್ರಮಾಣದ ನಷ್ಟ ಅನುಭವಿಸಿವೆ.
ವಾಹನ ಉತ್ಪಾದನೆ ಮತ್ತು ಮಾರಾಟವನ್ನು ಬಂದ್ ಮಾಡಿರುವುದರಿಂದ ಕಾರು ಉತ್ಪಾದನಾ ಕಂಪನಿಗಳಿಂತ ಕಾರು ಮಾರಾಟಗಾರರು ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ಸಂಕಷ್ಟದ ಸಮಯದಲ್ಲೂ ಕಾರು ಕಂಪನಿಗಳು ಮಾರಾಟಗಾರರ ಕೈ ಹಿಡಿದಿವೆ. ಹೌದು, ಕಾರು ಮಾರಾಟ ಪ್ರಕ್ರಿಯೆ ಬಂದ್ ಆಗಿದ್ದರಿಂದ ಆರ್ಥಿಕ ಸಂಕಷ್ಟದಲ್ಲಿರುವ ಮಾರಾಟಗಾರರಿಗೆ ಹಣಕಾಸು ನೆರವು ಮಾಡಿರುವ ಆಟೋ ಕಂಪನಿಗಳು ರೂ.1800 ಕೋಟಿ ಪರಿಹಾರ ಘೋಷಣೆ ಮಾಡಿವೆ.
ಪರಿಹಾರದ ಹಣದಲ್ಲಿ ಮಾರಾಟ ಮಳಿಗೆಗಳ ನಿರ್ವಹಣಾ ವೆಚ್ಚ ಮತ್ತು ಸಿಬ್ಬಂದಿ ವೇತನದ ಖರ್ಚು ಬಗೆಹರಿಯಲಿದ್ದು, ಮಾರಾಟವಾಗದೆ ಉಳಿದಿರುವ ಹಳೆಯ ಸ್ಟಾಕ್ ಮೇಲೂ ಹೆಚ್ಚಿನ ಮಟ್ಟದ ಧನಸಹಾಯ ನೀಡುವುದಾಗಿ ಘೋಷಿಸಿವೆ.
ಇದರಲ್ಲಿ ದೇಶದ ನಂ.1 ಕಾರು ಮಾರಾಟ ಕಂಪನಿ ಮಾರುತಿ ಸುಜುಕಿ ಒಂದೇ ರೂ.900 ಕೋಟಿ ಪರಿಹಾರ ಘೋಷಣೆ ಮಾಡಿದ್ದು, ಇನ್ನುಳಿದ ಕಾರು ಕಂಪನಿಗಳು ತಮ್ಮಅಧಿಕೃತ ಡೀಲರ್ಸ್‌ಗಳಿಗೆ ರೂ.900 ಕೋಟಿ ಪರಿಹಾರ ನೀಡಿವೆ.
ಇನ್ನು ಬಿಎಸ್-4 ವಾಹನಗಳು ಆಟೋ ಕಂಪನಿಗಳು ಭಾರೀ ಪ್ರಮಾಣದ ನಷ್ಟ ಉಂಟು ಮಾಡಲಿದ್ದು, ಏಪ್ರಿಲ್ 1ರಿಂದ ಬಿಎಸ್-6 ವಾಹನಗಳ ಮಾರಾಟವು ಕಡ್ಡಾಯವಾಗಿ ಜಾರಿ ಮಾಡಿರುವುದು ವಾಹನ ಉತ್ಪಾದನಾ ಕಂಪನಿಗಳಿಗೆ ಹಳೆಯ ಸ್ಟಾಕ್ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬಿಎಸ್-4 ವಾಹನಗಳನ್ನು ಬ್ಯಾನ್ ಮಾಡಲಾಗಿದ್ದರೂ ಕೂಡಾ ಪರಿಸ್ಥಿತಿಗೆ ಅನುಗುಣವಾಗಿ ಸದ್ಯಕ್ಕೆ ಕೆಲವು ವಿನಾಯ್ತಿಗಳನ್ನು ನೀಡಿರುವ ಸುಪ್ರೀಂಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿದೆ.
2018ರಲ್ಲೇ 2020ರ ಏಪ್ರಿಲ್ 1ರಿಂದ ಬಿಎಸ್-4 ವಾಹನಗಳ ಮಾರಾಟ ಮತ್ತು ನೋಂದಣಿ ಪ್ರಕ್ರಿಯೆಯನ್ನು ಬ್ಯಾನ್ ಮಾಡಿದ್ದ ಸುಪ್ರೀಂಕೋರ್ಟ್ ಕೊನೆಯ ಕ್ಷಣದಲ್ಲಿ ಬ್ಯಾನ್ ಅಸ್ತ್ರವನ್ನು ಸಡಿಲಿಸಿದ್ದು, ಕರೋನಾ ವೈರಸ್ ತಡೆ ಉದ್ದೇಶದಿಂದ ದೇಶಾದ್ಯಂತ ಜಾರಿಗೊಳಿಸಿರುವ ಲಾಕ್‌ಡೌನ್ ಹಿನ್ನಲೆಯಲ್ಲಿ ಆಟೋ ಕಂಪನಿಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಿದೆ.