Best Hybrid Cars: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಅತ್ಯುತ್ತಮ ಹೈಬ್ರಿಡ್ ಕಾರುಗಳಿವು! – Kannada News | Best Hybrid Cars in India Prices, Mileage and more, check out all details
ಭಾರತದಲ್ಲಿ ಹೈಬ್ರಿಡ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ವಿವಿಧ ಕಾರು ಕಂಪನಿಗಳು ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೈಬ್ರಿಡ್ ಮಾದರಿಗಳನ್ನು ಮಾರಾಟ ಮಾಡುತ್ತಿವೆ.
ಹೊಸ ಕಾರುಗಳ(New Cars) ವಿಭಾಗದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಜೊತೆ ಹೈಬ್ರಿಡ್ ಕಾರುಗಳು(Hybrid Cars) ಸಹ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೈಬ್ರಿಡ್ ಕಾರುಗಳು ದುಬಾರಿ ಬೆಲೆಯಲ್ಲಿ ಮಾತ್ರವಲ್ಲದೆ ಬಜೆಟ್ ಬೆಲೆಯಲ್ಲೂ ಸಹ ಮಾರಾಟಗೊಳ್ಳುತ್ತಿವೆ. ಮಧ್ಯಮ ಕ್ರಮಾಂಕದ ಎಸ್ ಯುವಿ ಕಾರುಗಳಲ್ಲಿ ಹೈಬ್ರಿಡ್ ಎಂಜಿನ್ ಆಯ್ಕೆ ಹೆಚ್ಚುತ್ತಿದ್ದು, ಸದ್ಯ ಹೆಚ್ಚಿನ ಬೇಡಿಕೆಯಲ್ಲಿರುವ ಪ್ರಮುಖ ಕಾರುಗಳ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
ದೇಶಿಯ ಮಾರುಕಟ್ಟೆಯಲ್ಲಿ ಹೈಬ್ರಿಡ್ ಕಾರುಗಳ ಅಬ್ಬರ ಹೆಚ್ಚುತ್ತಿದ್ದು, ಪೆಟ್ರೋಲ್ ಜೊತೆ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಹೊಂದಿರುವ ಹೈಬ್ರಿಡ್ ಕಾರುಗಳು ಪರ್ಫಾಮೆನ್ಸ್ ಜೊತೆಗೆ ಭರ್ಜರಿ ಮೈಲೇಜ್ ನೀಡುತ್ತಿವೆ. ಹೀಗಾಗಿ ಹೊಸ ಕಾರು ಖರೀದಿದಾರರು ಹೈಬ್ರಿಡ್ ಎಂಜಿನ್ ಪ್ರೇರಿತ ಕಾರುಗಳ ಆಯ್ಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಭಾರತದಲ್ಲಿ ಸದ್ಯ ಎಕ್ಸ್ ಶೋರೂಂ ಪ್ರಕಾರ ರೂ. 17 ಲಕ್ಷ ಆರಂಭಿಕ ಬೆಲೆ ಅಂತರದಲ್ಲಿ ಖರೀದಿಗೆ ಲಭ್ಯವಿವೆ.
ಬಜೆಟ್ ಬೆಲೆಗೆ ಖರೀದಿಗೆ ಲಭ್ಯವಿರುವ ಹೈಬ್ರಿಡ್ ಕಾರುಗಳ ಪಟ್ಟಿಯಲ್ಲಿ ಸದ್ಯ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಪ್ರಮುಖವಾಗಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 16.46 ಲಕ್ಷದಿಂದ ರೂ. 19.99 ಲಕ್ಷ ಬೆಲೆ ಹೊಂದಿದೆ. ಇದು 1.5 ಲೀ ಪೆಟ್ರೋಲ್ ಎಂಜಿನ್ ಜತೆ ಪ್ರತಿ ಲೀಟರ್ ಗೆ 27.97 ಕಿ.ಮೀ ಮೈಲೇಜ್ ನೀಡಲಿದ್ದು, ಪೆಟ್ರೋಲ್ ಎಂಜಿನ್ ಆಯ್ಕೆ ಸಹ ಖರೀದಿಗೆ ಲಭ್ಯವಿದೆ.
ಹೈರೈಡರ್ ಜೊತೆ ಪ್ಲ್ಯಾಟ್ ಫಾರ್ಮ್ ಹಂಚಿಕೊಂಡಿರುವ ಮಾರುತಿ ಗ್ರ್ಯಾಂಡ್ ವಿಟಾರಾ ಕಾರು ಕೂಡಾ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 18.29 ಲಕ್ಷದಿಂದ ರೂ. 19.79 ಲಕ್ಷ ಬೆಲೆ ಹೊಂದಿದೆ. ಗ್ರ್ಯಾಂಡ್ ವಿಟಾರಾ ಕೂಡಾ 1.5 ಲೀ ಪೆಟ್ರೋಲ್ ಎಂಜಿನ್ ಜತೆ ಪ್ರತಿ ಲೀಟರ್ ಗೆ 27.97 ಕಿ.ಮೀ ಮೈಲೇಜ್ ನೀಡಲಿದ್ದು, ಇದರಲ್ಲೂ ಸಹ ಪೆಟ್ರೋಲ್ ಎಂಜಿನ್ ಆಯ್ಕೆ ಲಭ್ಯವಿದೆ.
ಅತ್ಯುತ್ತಮ ಹೈಬ್ರಿಡ್ ಕಾರುಗಳಲ್ಲಿ ಹೋಂಡಾ ಸಿಟಿ ಸೆಡಾನ್ ಕಾರು ಸಹ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ.18.99 ಲಕ್ಷದಿಂದ ರೂ. 20.39 ಲಕ್ಷ ಬೆಲೆ ಹೊಂದಿದೆ. ಸಿಟಿ ಹೈಬ್ರಿಡ್ ಆವೃತ್ತಿಯು 1.5 ಲೀ ಪೆಟ್ರೋಲ್ ಎಂಜಿನ್ ಜತೆ ಪ್ರತಿ ಲೀಟರ್ ಗೆ 27.13 ಕಿ.ಮೀ ಮೈಲೇಜ್ ನೀಡಲಿದ್ದು, ಇದು ಕ್ರಮಾಂಕದ ಸೆಡಾನ್ ಕಾರುಗಳಲ್ಲಿ ಹೈಬ್ರಿಡ್ ಎಂಜಿನ್ ಆಯ್ಕೆಗೆ ಸಹಕಾರಿಯಾಗಿದೆ.
ಇನ್ನು ಹೈಬ್ರಿಡ್ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಇನ್ವಿಕ್ಟೊ ಮತ್ತು ಟೊಯೊಟಾ ಇನೋವಾ ಹೈಕ್ರಾಸ್ ಕೂಡಾ ಪ್ರಮುಖವಾಗಿದ್ದು, ಈ ಎರಡೂ ಕಾರುಗಳು ಸಾಮಾನ್ಯ ತಾಂತ್ರಿಕ ಅಂಶಗಳನ್ನು ಹೊಂದಿವೆ. ಟೊಯೊಟಾ ಮತ್ತು ಮಾರುತಿ ಸುಜುಕಿ ಕಂಪನಿಗಳು ಭಾರತದಲ್ಲಿ ಈಗಾಗಲೇ ಹಲವಾರು ಕಾರು ಮಾದರಿಗಳನ್ನು ರೀಬ್ಯಾಡ್ಜ್ ಆವೃತ್ತಿಗಳಾಗಿ ಮಾರಾಟ ಮಾಡುತ್ತಿದ್ದು, ಈ ಕಾರುಗಳು ಬ್ಯಾಡ್ಜಿಂಗ್ ಹೊರತುಪಡಿಸಿ ಒಂದೇ ರೀತಿಯಾದ ಪವರ್ ಟ್ರೈನ್, ಬ್ಯಾಟರಿ ಪ್ಯಾಕ್ ಮತ್ತು ತಂತ್ರಜ್ಞಾನಗಳ ಜೋಡಣೆ ಹೊಂದಿವೆ. ಆದರೆ ಬ್ರಾಂಡ್ ತಕ್ಕಂತೆ ವಿಭಿನ್ನ ವಿನ್ಯಾಸ ಹೊಂದಿದ್ದು, ಇದರಲ್ಲಿ ಇನ್ವಿಕ್ಟೊ ಹೈಬ್ರಿಡ್ ಎಕ್ಸ್ ಶೋರೂಂ ಪ್ರಕಾರ ರೂ. 24.79 ಲಕ್ಷದಿಂದ 28.42 ಲಕ್ಷ ಬೆಲೆ ಹೊಂದಿದೆ.
ಹಾಗೆಯೇ ಇನೋವಾ ಹೈಕ್ರಾಸ್ ಎಕ್ಸ್ ಶೋರೂಂ ಪ್ರಕಾರ ರೂ. 25.03 ಲಕ್ಷದಿಂದ 30.26 ಲಕ್ಷ ಬೆಲೆ ಹೊಂದಿದ್ದು, 2.0 ಲೀಟರ್ ಪೆಟ್ರೋಲ್ ಎಂಜಿನ್ ಜೋಡಿಸಲಾಗಿದೆ. ಹೈಬ್ರಿಡ್ ಎಂಜಿನ್ ಮಾದರಿಯು ಎಲೆಕ್ಟ್ರಿಕ್ ಮೋಟಾರ್ ಸಂಯೋಜನೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 23.24 ಕಿ.ಮೀ ಮೈಲೇಜ್ ನೀಡಲಿದೆ.