ಕಳೆದ 19 ಗಂಟೆಗಳಲ್ಲಿ ರಾಜ್ಯದಲ್ಲಿ ದಾಖಲಾಗಿದ್ದು ಕೇವಲ ಒಂದು ಹೊಸ ಕೊರೋನಾ ಪ್ರಕರಣ
ಬೆಂಗಳೂರು (ಏ.26): ಶನಿವಾರ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆವರೆಗೆ ರಾಜ್ಯದಲ್ಲಿ ಒಂದು ಹೊಸ ಕೊರೋನಾ ಪ್ರಕರಣ ಬೆಳಕಿಗೆ ಬಂದಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೂಲಕ ರಾಜ್ಯದ ಕೊರೋನಾ ಸೋಂಕಿತರ ಸಂಖ್ಯೆ 501ಕ್ಕೆ ಏರಿಕೆ ಆಗಿದೆ.
ದಕ್ಷಿಣ ಕನ್ನಡದ 47 ವರ್ಷದ ಮಹಿಳೆಯೊಬ್ಬರಿಗೆ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ. ಇವರನ್ನು ದಕ್ಷಿಣ ಕನ್ನಡದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನು ಹೊರತುಪಡಿಸಿದರೆ ಕಳೆದ 19 ಗಂಟೆಯಲ್ಲಿ ಮತ್ತಾವುದೇ ಹೊಸ ಪ್ರಕರಣ ಬೆಳಕಿಗೆ ಬಂದಿಲ್ಲ.
ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಉಳಿದ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕೊರೋನಾ ವೈರಸ್ ನಿಯಂತ್ರಣದಲ್ಲಿದೆ ಎನ್ನಬಹುದು.
ಇಂದು ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ದೇಶದಲ್ಲಿ 26 ಸಾವಿರ ಕೊರೋನಾ ವೈರಸ್ ಪ್ರಕರಣಗಳಿ ದೃಢಪಟ್ಟಿವೆ. ಈ ಪೈಕಿ 19,868 ಆಕ್ಟಿವ್ ಕೇಸ್ಗಳಿವೆ. 824 ಜನರು ಮೃತಪಟ್ಟಿದ್ದಾರೆ. 5,803 ಜನರು ಕೊರೋನಾ ಮುಕ್ತರಾಗಿ ಮನೆಗೆ ತೆರಳಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.