ಲಾಕ್ಡೌನ್ ವಿಸ್ತರಣೆ ಬೇಕೇ, ಬೇಡವೇ?; ಮುಖ್ಯಮಂತ್ರಿಗಳ ಜೊತೆ ನಾಳೆ ಪ್ರಧಾನಿ ಮೋದಿ ಚರ್ಚೆ
ಬೆಂಗಳೂರು (ಏ.26): ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಲಾಕ್ಡೌನ್ ಆದೇಶವನ್ನು ಮೇ 3ರವರೆಗೆ ವಿಸ್ತರಣೆ ಮಾಡಲಾಗಿದೆ. ಆದಾಗ್ಯೂ 26 ಸಾವಿರ ಜನರಿಗೆ ಕೊರೋನಾ ವೈರಸ್ ಅಂಟಿದೆ. ಹೀಗಾಗಿ ಮೇ 3ರ ನಂತರ ಲಾಕ್ಡೌನ್ ವಿಸ್ತರಣೆ ಮಾಡಬೇಕೋ ಅಥವಾ ಬೇಡವೋ ಎನ್ನುವುದರ ಕುರಿತು ಪ್ರಧಾನಿ ನರೇಂದ್ರ ಮೋದಿ ನಾಳೆ ಎಲ್ಲ ರಾಜ್ಯಗಳ ಸಿಎಂ ಜೊತೆ ಚರ್ಚೆ ನಡೆಸಲಿದ್ದಾರೆ.
ಬೆಳಗ್ಗೆ 11ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಚರ್ಚೆ ನಡೆಸಲಿದ್ದಾರೆ. ಆಯಾ ರಾಜ್ಯಗಳಲ್ಲಿ ಕೊರೋನಾ ಸೋಂಕು ಹರಡುವಿಕೆ ಪ್ರಮಾಣ ಹೇಗಿದೆ? ಕೊರೋನಾ ತಡೆಗಟ್ಟಲು ಇನ್ನೂ ಏನೇನು ಮಾಡಬಹುದು? ಲಾಕ್ಡೌನ್ ಮುಂದುವರೆಸಿದರೆ ಏನಾಗಬಹುದು? ಆರ್ಥಿಕವಾಗಿ ಯಾವ ಪರಿಣಾಮಗಳು ಉಂಟಾಗಬಹುದು? ಲಾಕ್ಡೌನ್ ತೆರವುಗೊಳಿಸಿದರೆ ಏನಾಗಬಹುದು? ಲಾಕ್ಡೌನ್ ತೆರವುಗೊಳಿಸಿ ಕೊರೋನಾ ತಡೆ ಸಾಧ್ಯವೇ? ವಲಯವಾರು ಹಂತಹಂತವಾಗಿ ವಿನಾಯಿತಿ ನೀಡಿದರೆ ಹೇಗೆ? ಎಂಬಿತ್ಯಾದಿಗಳ ಬಗ್ಗೆ ಮೋದಿ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ.
ಲಾಕ್ಡೌನ್ ವಿಸ್ತರಣೆ ಕುರಿತು ನಾಳೆ ಯಾವುದೇ ಚರ್ಚೆ ನಡೆದರೂ ಕೇಂದ್ರ ಸರ್ಕಾರವೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಇನ್ನು, ಕೊರೋನಾ ನಿಯಂತ್ರಣ ಮಾಡಲು ಹಲವು ರಾಜ್ಯಗಳಲ್ಲಿ ತೀವ್ರ ಆರ್ಥಿಕ ಹಿನ್ನಡೆ ಎದುರಿಸುತ್ತಿವೆ. ಹೀಗಾಗಿ ಕೆಲ ರಾಜ್ಯಗಳು ಕೆಂದ್ರದ ಎದುರು ಹಣಕ್ಕೆ ಬೇಡಿಕೆ ಇಡುವ ಸಾಧ್ಯತೆ ಇದೆ.