ಭೌಗೋಳಿಕ ಕೌತುಕ: ಇಂದು ವರ್ಷದ ದೀರ್ಘಕಾಲ ಹಗಲು ದಿನ
ನವದೆಹಲಿ: ಜೂನ್ 21, ವಿಶ್ವಾದ್ಯಂತ ಯೋಗ ದಿನಾಚರಣೆ ಆಚರಿಸುತ್ತಿರುವಂತೆಯೇ ಇಂದು ವರ್ಷದ ದೀರ್ಘಕಾಲ ಹಗಲು ಹೊಂದಿರುವ ದಿನ ಕೂಡ ಆಗಿದೆ.
ವಿಶ್ವಾದ್ಯಂತ ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ತೊಡಿರುವಂತೆಯೇ ಇಂದು ವರ್ಷದ ದೀರ್ಘಕಾಲ ಹಗಲು ಹೊಂದಿರುವ ದಿನವಾಗಿದೆ. ಜೂನ್ 21 ದೀರ್ಘಕಾಲ ಹಗಲು ಹೊಂದಿರುವ ದಿನ, ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ.
ಇನ್ನು ವಿಜ್ಞಾನಿಗಳು ನೀಡಿರುವ ಮಾಹಿತಿಯಂತೆ ಇಂದು ಬ್ರಿಟನ್ ನಲ್ಲಿ ಸುಧೀರ್ಘ 16 ಗಂಟೆಗಳ ಕಾಲ ಹಗಲಿರುತ್ತದೆಯಂತೆ. 4.52ಕ್ಕೆ ಸೂರ್ಯೋದಯವಾಗಿ ರಾತ್ರಿ 9.27ಕ್ಕೆ ಸೂರ್ಯಾಸ್ತವಾಗುತ್ತದೆಯಂತೆ. ಇದೇ ಕಾರಣಕ್ಕೆ ಇದು ವರ್ಷದ ದೀರ್ಘಕಾಲ ಹಗಲುದಿನವೆಂದು ಕರೆಯುತ್ತಾರೆ. ಇನ್ನು ಡಿಸೆಂಬರ್ 21 ವರ್ಷದ ಕಡಿಮೆ ಹಗಲಿನ ರಾತ್ರಿಯಾಗಿರುತ್ತದೆ. ಅಂದು ಸೂರ್ಯ ಬೆಳಗ್ಗೆ 8.4ಕ್ಕೆ ಉದಯಿಸಿ ಮಧ್ಯಾಹ್ನ 3.52ಕ್ಕೆ ಮುಳುಗುತ್ತಾನೆ ಎಂದು ತಜ್ಞರು ಹೇಳಿದ್ದಾರೆ.
ಜೂನ್ 21 ಮತ್ತು ಯೋಗ ದಿನದ ನಂಟು
ಈ ದಿನವನ್ನು ಬೇಸಿಗೆ ಅಯನ ಸಂಕ್ರಾಂತಿ ದಿನವೆಂದು (ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನ) ಕರೆಯಲಾಗುತ್ತದೆ!! ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆಯಲ್ಲದೇ, ಮುಂಗಾರು ಆಗಮನವಾಗಿ ಆಷಾಢದ ಗಾಳಿ ಮೈಮನ ಜಡಗಟ್ಟಿ ಹೆಚ್ಚಿನ ಚಟುವಟಿಕೆಗಳಿಂದ ಕೂಡಿದ ಕಾಲವಾಗಿದೆ. ಸೂರ್ಯನ ಪ್ರಖರತೆ ಒಂದೊಂದು ಕಾಲಕ್ಕೆ ಒಂದೊಂದು ಪ್ರದೇಶಕ್ಕೆ ಒಂದೊಂದು ರೀತಿಯಾಗಿರುತ್ತದೆ. ಆದರೆ, ಈ ಕಾಲದಲ್ಲಿ ಅನೇಕ ರಾಷ್ಟ್ರಗಳಲ್ಲಿ ಜಡತ್ವ ಕಳೆದು ಹೊಸ ಹುರುಪು ತುಂಬುವ ಕಾಲ, ಜೂನ್ 21 ದೀರ್ಘಕಾಲ ಹಗಲು ಹೊಂದಿರುವ ದಿನವೂ ಆಗಿದೆ. ಆದಿ ಕಾಲದಲ್ಲಿ ಸೂರ್ಯಾಭಿಮುಖವಾಗಿ ದೃಷ್ಟಿ ನೆಟ್ಟು “ಧೀ ಶಕ್ತಿ” ಉದ್ದೀಪನಗೊಳಿಸುತ್ತಿದ್ದ ದಿನ ಇದಾಗಿದೆ ಎಂದು ನಂಬಲಾಗಿದೆ. ಹಾಗಾಗಿ ಈ ಪರಿವರ್ತನೆಯು ಯೋಗ ಅಭ್ಯಾಸಿಗರಿಗೆ ಬೆಂಬಲಿಸಲಾಗುತ್ತದೆ ಎಂಬ ನಂಬಿಕೆಯಿದೆ.
ಯೋಗಾಭ್ಯಾಸ, ವಿಶ್ವಕ್ಕೆ ಭಾರತ ನೀಡಿದ ಅದ್ಭುತ ಕಾಣಿಕೆ. ಈಗ ವಿಶ್ವಯೋಗ ದಿನಾಚರಣೆ ಇಡೀ ವಿಶ್ವಕ್ಕೆ ಭಾರತದ ಕೊಡುಗೆಯಾಗಿದೆ. ಇವೆಲ್ಲದರ ಹೊರತಾಗಿ, ಶಿವ ದೇವರು ಈ ದಿನದಂದು ಉಳಿದ ಮಾನವ ಜನಾಂಗಕ್ಕೆ ಯೋಗದ ಜ್ಞಾನವನ್ನು ನೀಡಲು ಪ್ರಾರಂಭಿಸಿದನೆಂಬ ನಂಬಿಕೆಯಿದೆ. ಅಷ್ಟೇ ಅಲ್ಲದೇ, ಶಿವ, ಈಶ್ವರ, ಬೋಲೆನಾಥನೆಂದು ಕರೆಸಿಕೊಳ್ಳುವ ಮಹಾದೇವನು ಯೋಗದ ಆದಿ ಗುರು ಆದ ದಿನವೂ ಕೂಡಾ ಹೌದು. ಹೀಗಾಗಿ, ಇದೇ ದಿನ ಸೂಕ್ತ ಎಂದು ಪ್ರಧಾನಿ ಮೋದಿ ಅವರು ಆಯ್ಕೆ ಮಾಡಿಕೊಂಡಿದ್ದಾರೆ.