ನ್ಯಾಯಾಲಯದಲ್ಲೇ ಪತ್ನಿ ಕತ್ತು ಸೀಳಿ ಕೊಂದ ಪುತ್ರಿ ಅತ್ಯಾಚಾರಿ
ದಿಬ್ರುಗಢ: ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲ ಬಂಧಿತನಾಗಿದ್ದು ಆರೋಪಿಯೊಬ್ಬ ನ್ಯಾಯಾಲಯದ ಆವರಣದಲ್ಲೇ ಪತ್ನಿಯ ಹತ್ಯೆಗೈದ ಬೆಚ್ಚಿಬೀಳಿಸುವ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.
ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ವಿರುದ್ಧ ಪತ್ನಿ ದೂರು ನೀಡಿದ್ದಳು. ಕಳೆದ ಸೆಪ್ಟೆಂಬರ್ 2017ರಲ್ಲಿ ಜೈಲು ಪಾಲಾಗಿದ್ದ ಆತ ಜೂನ್ 6 ರಂದು ಜಾಮೀನಿನ ಮೇಲೆ ಹೊರ ಬಂದಿದ್ದ, ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಆರೋಪಿ ವಿಚಾರಣೆ ಇದ್ದು, ಆತನ ಪತ್ನಿ ಮತ್ಕು ಪುತ್ರಿ ಕೂಡ ನ್ಯಾಯಾಲಯಕ್ಕೆ ಆಗಮಿಸಿದ್ದರು. ತನ್ನ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದ ಪತ್ನಿ ಮೇಲೆ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದ ಆರೋಪಿ ಚಾಕುವಿನಿಂದ ಆಕೆಯ ಕುತ್ತಿಗೆ ಸೀಳಿದ್ದಾನೆ. ಗಾಯಗೊಂಡು ನೆಲಕ್ಕುರುಳಿದ ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಆಕೆ ದಾರಿ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಳು.
ಕೃತ್ಯ ನಡೆಸಿದ ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದನಾದರೂ ನ್ಯಾಯಾಲಯದ ಭದ್ರತಾ ಸಿಬ್ಬಂದಿ ಮತ್ತು ಅಲ್ಲಿಂದ ವಕೀಲರು ಆತನನ್ನು ಹಿಡಿಯಲು ಯಶಸ್ವಿಯಾದರು.
ಹೆತ್ತ ತಂದೆಯಿಂದಲೇ ಅತ್ಯಾಚಾರಕ್ಕೊಳಗಾಗಿ ತಾಯಿ ಆಶ್ರಯದಲ್ಲಿದ್ದ ಮಗು ಈಗ ಅನಾಥವಾಗಿದೆ.