ಏನಿದು ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ? ಬಿಸಿಸಿಐಗೆ ದಂಡ ವಿಧಿಸಿದ್ದೇಕೆ?
ನವದೆಹಲಿ: 2009ರ ಐಪಿಎಲ್ ಟೂರ್ನಿ ಆಯೋಜನೆ ಸಂಬಂಧ ಬಿಸಿಸಿಐಗೆ ಜಾರಿ ನಿರ್ದೇಶನಾಲಯ ಬರೊಬ್ಬರಿ 121 ಕೋಟಿ ದಂಡ ವಿಧಿಸಿದೆ. ಇಷ್ಟಕ್ಕೂ ಏನಿದು ಈ ಪ್ರಕರಣ..
2009ರಲ್ಲಿ ದೇಶದಲ್ಲಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಐಪಿಎಲ್ ಟೂರ್ನಿಯನ್ನು ಭಾರತದಿಂದ ದಕ್ಷಿಣ ಆಫ್ರಿಕಾಗೆ ಸ್ಥಳಾಂತರ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಅಂದಿನ ಬಿಸಿಸಿಐ ಅದ್ಯಕ್ಷ ಎನ್ ಶ್ರೀನಿವಾಸನ್, ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಮತ್ತು ಬಿಸಿಸಿಐ ಖಜಾಂಚಿ ಪಾಂಡೋವ್ ದಕ್ಷಿಣ ಆಫ್ರಿಕಾಗೆ ಸುಮಾರು 243 ಕೋಟಿಗೂ ಅಧಿಕ ಹಣವನ್ನು ವರ್ಗಾವಣೆ ಮಾಡಿದ್ದರು.
ದೇಶದ ಹಣವನ್ನು ವಿದೇಶಕ್ಕೆ ವರ್ಗಾವಣೆ ಮಾಡುವಾಗ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ಸೂಚನೆಗಳನ್ನು ಪಾಲಿಸಬೇಕಿತ್ತು. ಆದರೆ ಬಿಸಿಸಿಐ ಈ ಕಾಯ್ದೆಯ ಯಾವುದೇ ನಿಯಮಗಳನ್ನು ಪಾಲಿಸಿರಲಿಲ್ಲ. ಇದು ಆರ್ ಬಿಐ ಕೆಂಗಣ್ಣಿಗೆ ಕಾರಣವಾಗಿತ್ತು. ಈ ಸಂಬಂಧ ಕೇಂದ್ರ ಸರ್ಕಾರ ತನಿಖೆಗೆ ಆದೇಶ ನೀಡಿತ್ತು. ಇದೀಗ ಈ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಬಿಸಿಸಿಗೆ 121 ಕೋಟಿ ದಂಡ ವಿಧಿಸಿದೆ.
2009ರ ಐಪಿಎಲ್- ಸೀಸನ್ 2ಗೆ ಸಂಬಂಧಿಸಿದಂತೆ 1,325 ಕೋಟಿ ರೂ. ಹಣವನ್ನು ಅಂದಿನ ಐಪಿಎಲ್ ಚೇರ್ಮನ್ ಲಲಿತ್ ಮೋದಿ ಭಾರತದಿಂದ ದಕ್ಷಿಣ ಆಫ್ರಿಕಾಗೆ ವರ್ಗಾವಣೆ ಮಾಡಿದ್ದರು ಎಂಬ ಆರೋಪವಿದೆ. ಈ ವರ್ಗಾವಣೆಗೆ ಆರ್ಬಿಐನ ಒಪ್ಪಿಗೆ ಪಡೆಯುವಂತೆ ಬಿಸಿಸಿಐನ ಕಾರ್ಯಕಾರಿ ಸಮಿತಿ ಸೂಚಿಸಿತ್ತು. ಆದರೂ ಲಲಿತ್ ಮೋದಿ ಈ ಸೂಚನೆ ನಿರ್ಲಕ್ಷಿಸಿ, ವಿದೇಶಿ ವಿನಿಮಯ ನೀತಿ ನಿಯಮಗಳನ್ನು ಉಲ್ಲಂಘಿಸಿ ಹಣ ವರ್ಗಾವಣೆ ಮಾಡಿದ್ದರು ಎನ್ನಲಾಗಿದೆ.
2009ರ ಐಪಿಎಲ್ ಪಂದ್ಯಾವಳಿ ಪ್ರಸಾರಕ್ಕೆ ಸಂಬಂಧಿಸಿದ ವ್ಯವಹಾರದಲ್ಲಿ ಅಕ್ರಮ ನಡೆಸಿದ ಆರೋಪವನ್ನೂ ಲಲಿತ್ ಎದುರಿಸುತ್ತಿದ್ದಾರೆ. ನಿಯಮ ಮೀರಿ 425 ಕೋಟಿ ರೂ. ಮೊತ್ತದ ಪ್ರಸಾರದ ಹಕ್ಕುಗಳನ್ನು ನೀಡಲಾಗಿತ್ತು. ಮೊದಲಿಗೆ ಸೋನಿ ಕಂಪನಿಯ ಮಲ್ಟಿ ಸ್ಕ್ರೀನ್ ಮಿಡಿಯಾ (ಎಂಎಸ್ಎಂ)ಗೆ ಹಕ್ಕು ನೀಡಲಾಗಿತ್ತು. ಈ ಕಂಪನಿ ಜತೆಗಿನ ಒಪ್ಪಂದ ರದ್ದು ಮಾಡಿದ ಲಲಿತ್ ಮೋದಿ, ತಮಗೆ ಅಪರಿಚತವಾದ, ಮಾರಿಷಿಸ್ ಮೂಲದ ವರ್ಲ್ಡ್ ಸ್ಪೋರ್ಟ್ಸ್ ಗ್ರೂಪ್(ಡಬ್ಲ್ಯೂಎಸ್ಜಿ)ನೊಂದಿಗೆ ಒಪ್ಪಂದ ಮಾಡಿಕೊಂಡರು. ಆದರೆ, ಈ ಕಂಪನಿ 335 ಕೋಟಿ ರೂ.ಬ್ಯಾಂಕ್ ಗ್ಯಾರಂಟಿ ನೀಡಲು ವಿಫಲವಾಯಿತು. ಆದರೆ, ಕೊನೆಗೆ ಬಿಸಿಸಿಐ ಮತ್ತು ಈ ಎರಡೂ ಕಂಪನಿಗಳು ನಿಗದಿತ ಒಪ್ಪಂದವೊಂದಕ್ಕೆ ಬಂದು ವ್ಯವಹಾರವನ್ನು ಪೂರ್ಣಗೊಳಿಸಿದ್ದವು.
ಈ ವೇಳೆಯೂ ಫೆಮಾ(ಎಫ್ಇಎಂಎ)ನಿಯಮ ಉಲ್ಲಂಘನೆಯಾದ ಬಗ್ಗೆ ಜಾರಿ ನಿರ್ದೇಶನಾಲಯ ಲಲಿತ್ ಮೋದಿಗೆ ನೋಟಿಸ್ ನೀಡಿತ್ತು.
2008ರ ಐಪಿಎಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ವಿದೇಶಿ ಆಟಗಾರರ ಸಂಭಾವನೆಗೆ ಬಿಸಿಸಿಐ ಗ್ಯಾರಂಟಿ ನೀಡಿತ್ತು. ಒಂದು ವೇಳೆ ಫ್ರಾಂಚೈಸಿಗಳು ತಮ್ಮ ವಿದೇಶಿ ಆಟಗಾರರಿಗೆ ಸಂಭಾವನೆ ನೀಡದಿದ್ದರೆ ಅದನ್ನು ಬಿಸಿಸಿಐ ಸರಿದೂಗಿಸುವ ಭರವಸೆಯನ್ನು ನೀಡಲಾಗಿತ್ತು. ಆದರೆ, ಇದಕ್ಕೆ ಆರ್ಬಿಐನಿಂದ ಒಪ್ಪಿಗೆ ಪಡೆದಿರಲಿಲ್ಲ. ಈ ವ್ಯವಹಾರದಲ್ಲೂ 160 ಕೋಟಿ ರೂ. ಚಲಾವಣೆಯಾಗಿತ್ತು. ಈ ಸಂಬಂಧ ಜಾರಿ ನಿರ್ದೇಶನಾಲಯ ಬಿಸಿಸಿಐ ಮತ್ತು ಲಲಿತ್ ಮೋದಿಗೆ ನೋಟಿಸ್ ನೀಡಿತ್ತು.
ಬಿಸಿಸಿಐನಿಂದ ವಿದೇಶಗಳಲ್ಲಿ ನೇಮಕ ಮಾಡಿಕೊಳ್ಳಲಾಗಿದ್ದ ಸಮಾಲೋಚಕರಿಗೆ 88.5 ಕೋಟಿ ರೂ. ಸಂದಾಯ ಮಾಡಲಾಗಿತ್ತು. ಈ ವ್ಯವಹಾರಕ್ಕೂ ಆರ್ಬಿಐನಿಂದ ಒಪ್ಪಿಗೆ ಪಡೆದಿರಲಿಲ್ಲ. ಅಲ್ಲದೆ, ಫೆಮಾ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿತ್ತು.
ಹೀಗಾಗಿ ಅಂತಿಮವಾಗಿ ಇಂದು ಜಾರಿ ನಿರ್ದೇಶನಾಲಯ ಬಿಸಿಸಿಐ, ಎನ್ ಶ್ರೀನಿವಾಸನ್, ಲಲಿತ್ ಮೋದಿ ಮತ್ತು ಅಂದಿನ ಬಿಸಿಸಿಐ ಖಜಾಂಚಿಗೆ ದಂಡ ವಿಧಿಸಿದೆ. ಅಲ್ಲದೆ ಈ ಅಕ್ರಮ ವ್ಯವಹಾರಕ್ಕೆ ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಸ್ಟೇಟ್ ಬ್ಯಾಂಕ್ ತಿರುವಾಂಕೂರ್ ಗೂ ಜಾರಿ ನಿರ್ದೇಶನಾಲಯ ದಂಡ ವಿಧಿಸಿದೆ.