EBM News Kannada
Leading News Portal in Kannada

ಅಲ್ಪಸಂಖ್ಯಾತ ನಿರ್ದೇಶನಾಲಯದ ಕೋಚಿಂಗ್ ಸೆಂಟರ್ ತರಬೇತಿ ಪಡೆದ 16 ಮಂದಿಗೆ ಸರಕಾರಿ ಹುದ್ದೆ: ಝಮೀರ್ ಅಹ್ಮದ್ ಖಾನ್

0


ಬೆಂಗಳೂರು: ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ ಹಜ್ ಭವನದಲ್ಲಿ ಆರಂಭಿಸಿದ ಐಎಎಸ್, ಕೆಎಎಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಲ್ಲಿ 16 ಮಂದಿ ಸರಕಾರಿ ಹುದ್ದೆ ಪಡೆದಿದ್ದಾರೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಸಂತಸ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದಲ್ಲಿರುವ ಅಲ್ಪಸಂಖ್ಯಾತರ ನಿರ್ದೇಶನಾಲಯದ ಸಭಾಂಗಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ಐಎಎಸ್, ಕೆಎಎಸ್ ನಾಗರಿಕ ಸೇವಾ ಪರೀಕ್ಷೆ ಕೈಗೊಳ್ಳಲು ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು, ಅದರ ನಡುವೆಯೆ ಬೇರೆ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಸರಕಾರಿ ಹುದ್ದೆ ಪಡೆದಿದ್ದಾರೆ ಎಂದರು.

ಉನ್ನತ ಶಿಕ್ಷಣ ಪಡೆದ ಸಮುದಾಯದ ಅಭ್ಯರ್ಥಿಗಳ ಉಜ್ವಲ ಭವಿಷ್ಯಕ್ಕೆ ಆರಂಭಿಸಿದ ತರಬೇತಿ ಕೇಂದ್ರದಲ್ಲಿ ಅತ್ಯಲ್ಪ ಅವಧಿಯಲ್ಲಿ 16 ಮಂದಿ ಸರಕಾರಿ ಉದ್ಯೋಗ ಪಡೆದಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ. ಕನಿಷ್ಠ 50 ಮಂದಿ ಐಎಎಸ್ ಪರೀಕ್ಷೆ ಪಾಸ್ ಮಾಡುವ ಮಟ್ಟಕ್ಕೆ ಗುಣಮಟ್ಟದ ತರಬೇತಿ ನೀಡುವ ಗುರಿ ಹೊಂದಿದ್ದೇವೆ ಎಂದು ಅವರು ತಿಳಿಸಿದರು.

ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ನಿಟ್ಟಿನಲ್ಲಿ 2023-24 ಸಾಲಿನಲ್ಲಿ ಐದು ಲಕ್ಷ ವಿದ್ಯಾರ್ಥಿಗಳಿಗೆ 161 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗಿದೆ. ಇಲಾಖೆಗೆ ನಿಗದಿಯಾಗಿದ್ದ 1535 ಕೋಟಿ ರೂ. ಅನುದಾನದ ಪೈಕಿ 1525 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ವೆಚ್ಚವಾಗುವ ಮೂಲಕ ಶೇ. 99.75 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಅಲ್ಪಸಂಖ್ಯಾತರ ನಿರ್ದೇನಾಲಯ ವ್ಯಾಪ್ತಿಯ ವಸತಿ ಕಾಲೇಜು, ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ. ವಸತಿ ಕಾಲೇಜಿನ ಪಿಯುಸಿ ಪರೀಕ್ಷೆಯಲ್ಲಿ 1908 ವಿದ್ಯಾರ್ಥಿಗಳ ಪೈಕಿ 1869 ವಿದ್ಯಾರ್ಥಿಗಳು ತೇರ್ಗಡೆಯಾಗಿ 686 ವಿದ್ಯಾರ್ಥಿಗಳು ಅಗ್ರ ಶ್ರೇಣಿ, 1118 ವಿದ್ಯಾರ್ಥಿಗಳು ಪ್ರಥಮ ದರ್ಜೆ ಯಲ್ಲಿ ಉತ್ತೀರ್ಣ ಮೂಲಕ ಶೇ.98 ರಷ್ಟು ಫಲಿತಾಂಶ ಬಂದಿದೆ ಎಂದು ಅವರು ತಿಳಿಸಿದರು.

ಇದೇ ಮೊದಲ ಬಾರಿಗೆ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಆರಂಭಿಸಿದ ಸಿಬಿಎಸ್‍ಇ ಪಠ್ಯ ಕ್ರಮದಲ್ಲಿ 1228 ವಿದ್ಯಾರ್ಥಿಗಳ ಪೈಕಿ 1183 ವಿದ್ಯಾರ್ಥಿಗಳು ತೇರ್ಗಡೆ ಯಾಗಿ 20 ವಿದ್ಯಾರ್ಥಿಗಳು ಅಗ್ರ ಶ್ರೇಣಿ, 369 ವಿದ್ಯಾರ್ಥಿಗಳು ಪ್ರಥಮ ದರ್ಜೆ ಮೂಲಕ ಶೇ.97 ರಷ್ಟು, ರಾಜ್ಯ ಪಠ್ಯ ಕ್ರಮದ ವಸತಿ ಶಾಲೆಗಳಲ್ಲಿ ಶೇ. 91.20 ರಷ್ಟು ಫಲಿತಾಂಶ ಬಂದಿರುವ ಬಗ್ಗೆ ಅಧಿಕಾರಿಗಳು ವಿವರಿಸಿದರು. ಇದಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್, ನಿರ್ದೇಶಕ ಜಿಲಾನಿ ಮೊಕಾಶಿ ಉಪಸ್ಥಿತರಿದ್ದರು.

Leave A Reply

Your email address will not be published.