‘ಆಂಟಿ’ ಎಂದು ಕರೆದಿದ್ದಕ್ಕೆ ATM ಭದ್ರತಾ ಸಿಬ್ಬಂದಿಗೆ ಥಳಿಸಿದ ಮಹಿಳೆ | Kannada Dunia | Kannada News | Karnataka News
23-09-2023 5:45PM IST
/
No Comments /
Posted In: Karnataka, Latest News, Live News
ಬೆಂಗಳೂರು: ಎಟಿಎಂಗೆ ಬಂದ ಮಹಿಳೆಯನ್ನು ‘ಆಂಟಿ’ ಎಂದು ಕರೆದಿದ್ದಕ್ಕೆ ಕೋಪಗೊಂಡ ಮಹಿಳೆ ಭದ್ರತಾ ಸಿಬ್ಬಂದಿಯನ್ನು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎಟಿಎಂಗೆ ಹಣ ತುಂಬಿಸುವ ವೇಳೆ ಬಂದ ಮಹಿಳೆಯನ್ನು ಭದ್ರತಾ ಸಿಬ್ಬಂದಿ ‘ಆಂಟಿ ಪಕ್ಕಕ್ಕೆ ಸರಿಯಿರಿ’ ಎಂದು ಹೇಳಿದ್ದಾರೆ. ‘ಆಂಟಿ’ ಎಂದು ಕರೆದಿದ್ದಕ್ಕೆ ಸಿಟ್ಟಿಗೆದ್ದ ಮಹಿಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರಂತೆ.
ಈ ಬಗ್ಗೆ 64 ವರ್ಷದ ಖಾಸಗಿ ಸೆಕ್ಯೂರಿಟಿ ಏಜೆನ್ಸಿಯ ಭದ್ರತಾ ಸಿಬ್ಬಂದಿ ನೀಡಿರುವ ದೂರಿನ ಮೇರೆಗೆ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಲ್ಲೇಶ್ವರಂನ ಗಣೇಶ ದೇವಸ್ಥಾನದ ಎದುರಿರುವ ಎಟಿಎಂಗೆ ಹಣ ತುಂಬಿಸಲಾಗುತ್ತಿತ್ತು. ಈ ವೇಳೆ ಎಟಿಎಂ ಬಾಗಿಲ ಬಳಿ ಬಂದ ಮಹಿಳೆಗೆ ‘ಆಂಟಿ ಸರಿಯಿರಿ’ ಎಂದು ಭದ್ರತಾ ಸಿಬ್ಬಂದಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಮಹಿಳೆ ನನ್ನನ್ನೇ ಆಂಟಿ ಅನ್ನುತ್ತೀಯಾ? ಎಂದು ಪ್ರಶ್ನಿಸಿ, ನಿಂದಿಸಿದ್ದಲ್ಲದೇ ತಾವು ಧರಿಸಿದ್ದ ಚಪ್ಪಲಿಯಿಂದ ಕಪಾಳಕ್ಕೆ ಹೊಡೆದು ಜೀವ ಬೆದರಿಕೆ ಹಾಕಿದ್ದಾರಂತೆ. ಈ ವೇಳೆ ಸಾರ್ವಜನಿಕರು ಮಹಿಳೆಯಿಂದ ನನ್ನನ್ನು ಬಿಡಿಸಿದ್ದಾರೆ ಎಂದು ಭದ್ರತಾ ಸಿಬ್ಬಂದಿ ದೂರು ನೀಡಿದ್ದಾರೆ.