ಒಟ್ಟಾವ : ಖಾಲಿಸ್ತಾನಿ ಮುಖಂಡ ಹರ್ದೀಪ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಏಜೆಂಟರ ಸಂಭಾವ್ಯ ಸಂಪರ್ಕಕ್ಕೆ ಸಂಬಂಧಿಸಿದ ವಿಶ್ವಾಸಾರ್ಹ ಆರೋಪಗಳನ್ನು ವಾರಗಳ ಹಿಂದೆಯೇ ಭಾರತದೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಪುನರುಚ್ಚರಿಸಿದ್ದಾರೆ.
ಕೆನಡಾಕ್ಕೆ ಭೇಟಿ ನೀಡಿರುವ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಜತೆ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಟ್ರೂಡೊ `ಕೆನಡಾವು ಭಾರತದ ಜತೆ ವಿಶ್ವಾಸಾರ್ಹ ಮಾಹಿತಿಯನ್ನು ಹಂಚಿಕೊಂಡಿದ್ದು ಈ ಗಂಭೀರ ಪ್ರಕರಣದ ತಳಮಟ್ಟದ ತನಿಖೆಯಲ್ಲಿ ಅವರು ನಮ್ಮೊಂದಿಗೆ ಸಹಕರಿಸುವರೆಂದು ಭಾವಿಸುತ್ತೇನೆ’ ಎಂದರು.
ನಿಜ್ಜಾರ್ ಹತ್ಯೆಯಲ್ಲಿ ಭಾರತದ ಏಜೆಂಟರ ಸಂಭಾವ್ಯ ಸಂಪರ್ಕಕ್ಕೆ ಸಂಬಂಧಿಸಿದ ಯಾವುದೇ ನಿರ್ದಿಷ್ಟ ಮಾಹಿತಿ ಕೆನಡಾದಿಂದ ಬಂದಿಲ್ಲ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಆರಿಂದಮ್ ಬಾಗ್ಚಿ ನೀಡಿದ ಹೇಳಿಕೆಗೆ ಟ್ರೂಡೊ ಪ್ರತಿಕ್ರಿಯಿಸುತ್ತಿದ್ದರು.
ಈ ಮಧ್ಯೆ, ಗುರುವಾರ ನ್ಯೂಯಾರ್ಕ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಟ್ರೂಡೊ ` ಭಾರತವು ಬೆಳೆಯುತ್ತಿರುವ ಪ್ರಮುಖ ದೇಶ. ಪ್ರಪಂಚದಾದ್ಯಂತ ಅದರೊಡನೆ ಕೆಲಸ ಮಾಡುವುದನ್ನು ಮುಂದುವರಿಸಬೇಕು. ನಾವು ಪ್ರಚೋದಿಸುವ ಅಥವಾ ಸಮಸ್ಯೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿಲ್ಲ’ ಎಂದು ಹೇಳುವ ಮೂಲಕ ತುಸು ಮೃದು ಧೋರಣೆ ತಳೆದಿದ್ದಾರೆ ಎಂದು ಮಾಧ್ಯಮಗಳು ವಿಶ್ಲೇಷಿಸಿವೆ.
ಶುಕ್ರವಾರ ಮಾಧ್ಯಮದ ಜತೆ ಮಾತನಾಡಿದ್ದ ಕೆನಡಾದ ವಿಜ್ಞಾನ ಮತ್ತು ಕೈಗಾರಿಕಾ ಸಚಿವ ಫ್ರಾಂಕೋಯಿಸ್ ಫಿಲಿಪ್ ` ಉದ್ವಿಗ್ನತೆಯ ತೀವ್ರತೆಯನ್ನು ಕಡಿಮೆಗೊಳಿಸುವ ಸಮಯ ಇದಾಗಿದೆ. ಉದ್ವಿಗ್ನತೆ ಉಲ್ಬಣಿಸುವುದು ಯಾರೊಬ್ಬರ ಹಿತಾಸಕ್ತಿಗೂ ಪೂರಕವಾಗದು’ ಎಂದಿದ್ದರು.