Toyota Rumion: ಟೊಯೊಟಾ ಬಹುನೀರಿಕ್ಷಿತ ರೂಮಿಯಾನ್ ಎಂಪಿವಿ ಅನಾವರಣ – Kannada News | Toyota Rumion MPV revealed in India ahead of the launch, check out all details
ಟೊಯೊಟಾ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ರೂಮಿಯಾನ್ ರೀಬ್ಯಾಡ್ಜ್ ಆವೃತ್ತಿಯನ್ನು ಅನಾವರಣಗೊಳಿಸಿದೆ.
ಟೊಯೊಟಾ ಬಹುನೀರಿಕ್ಷಿತ ರೂಮಿಯಾನ್ ಎಂಪಿವಿ ಅನಾವರಣ
ಪ್ರೀಮಿಯಂ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟೊಯೊಟಾ ಇಂಡಿಯಾ(Toyota India) ಕಂಪನಿಯು ಮಾರುತಿ ಸುಜುಕಿ ಜೊತೆಗೂಡಿ ಈಗಾಗಲೇ ಹಲವಾರು ಕಾರು ಮಾದರಿಗಳ ರೀಬ್ಯಾಡ್ಜ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಹೊಸದಾಗಿ ಎರ್ಟಿಗಾ ಆಧರಿಸಿರುವ ರೂಮಿಯಾನ್(Rumion) ಎಂಪಿವಿ ಅನಾವರಣಗೊಳಿಸಿದೆ.
ಪಾಲುದಾರಿಕೆ ಯೋಜನೆಯಡಿ ಭಾರತದಲ್ಲಿ ಐದಕ್ಕೂ ಹೆಚ್ಚು ಕಾರುಗಳನ್ನು ರೀಬ್ಯಾಡ್ಜ್ ಆವೃತ್ತಿಗಳಾಗಿ ಮಾರಾಟ ಮಾಡುತ್ತಿರುವ ಟೊಯೊಟಾ ಮತ್ತು ಮಾರುತಿ ಸುಜುಕಿ ಕಂಪನಿಗಳು ಇದೀಗ ಹೊಸ ರೂಮಿಯಾನ್ ಎಂಪಿವಿ ಅನಾವರಣಗೊಳಿಸಿದ್ದು, ಬಹುತೇಕ ಎರ್ಟಿಗಾ ಎಂಪಿವಿ ಆಧರಿಸಿ ನಿರ್ಮಾಣವಾಗಿರುವ ಹೊಸ ಕಾರಿನ ಬೆಲೆಯು ಈ ತಿಂಗಳಾಂತ್ಯಕ್ಕೆ ಪ್ರಕಟಗೊಳ್ಳಲಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ರೂಮಿಯಾನ್ ಎಂಪಿವಿ ಮಾದರಿಯನ್ನು ಮಾರಾಟ ಮಾಡುತ್ತಿರುವ ಟೊಯೊಟಾ ಕಂಪನಿಯು ಭಾರತದಲ್ಲಿ ಮಾತ್ರ ಎರ್ಟಿಗಾ ಆವೃತ್ತಿಯನ್ನೇ ಪಾಲುದಾರಿಕೆ ಯೋಜನೆ ಅಡಿ ರೀಬ್ಯಾಡ್ಜ್ ಮಾಡಿ ರೂಮಿಯಾನ್ ನಿರ್ಮಾಣ ಮಾಡಿದೆ. ಹೊಸ ಕಾರಿನಲ್ಲಿ ಟೊಯೊಟಾ ಕಂಪನಿಯು ಎರ್ಟಿಗಾ ಕಾರಿಗಿಂತಲೂ ತುಸು ವಿಭಿನ್ನವಾಗಿ ಗುರುತಿಸಲು ಸಹಕಾರಿಯಾಗುವಂತೆ ವಿನ್ಯಾಸದಲ್ಲಿ ಬದಲಾವಣೆಗೊಳಿಸಿದ್ದು, ಇನೋವಾದಿಂದ ಸ್ಪೂರ್ತಿ ಪಡೆದಿರುವ ಫ್ರಂಟ್ ಗ್ರಿಲ್, ಫ್ರಂಟ್ ಬಂಪರ್, ಕ್ರೋಮ್ ಸರೌಂಡ್ ಹೊಂದಿರುವ ಏರ್ ಡ್ಯಾಮ್ ಮತ್ತು ಮಷಿನ್ ಫಿನಿಶ್ಡ್ ಹೊಂದಿರುವ ಅಲಾಯ್ ವ್ಹೀಲ್ ಗಳನ್ನು ಪಡೆದುಕೊಂಡಿದೆ.
ಜೊತೆಗೆ ಹೊಸ ಕಾರಿನ ಒಳಭಾಗದಲ್ಲಿ 7 ಸೀಟರ್ ಸೌಲಭ್ಯದೊಂದಿಗೆ ಬ್ಲ್ಯಾಕ್ ಔಟ್ ಡ್ಯಾಶ್ ಬೋರ್ಡ್, ವುಡ್ ಇನ್ಸರ್ಟ್, ಅರಾಮದಾಯಕವಾಗಿರುವ ಆಸನಗಳನ್ನು ನೀಡಲಾಗಿದ್ದು, ಇದು ಎಸ್, ಜಿ, ವಿ ಎನ್ನುವ ಪ್ರಮುಖ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.
ಎಂಜಿನ್ ಮತ್ತು ಪರ್ಫಾಮೆನ್ಸ್
ಹೊಸ ಟೊಯೊಟಾ ರೂಮಿಯಾನ್ ಎಂಪಿವಿ ಕಾರು ಮಾರುತಿ ಸುಜುಕಿ ಎರ್ಟಿಗಾದಲ್ಲಿರುವಂತೆಯೇ 1.5 ಲೀಟರ್ ಕೆ15ಸಿ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 103 ಹಾರ್ಸ್ ಪವರ್ ಮತ್ತು 137 ಎನ್ಎಂ ಟಾರ್ಕ್ ಉತ್ಪಾದಿಸಲಿದೆ. ಹಾಗೆಯೇ ಹೊಸ ಕಾರಿನಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಫ್ಯಾಕ್ಟರಿ ಸಿಎನ್ ಜಿ ಕಿಟ್ ಜೋಡಣೆ ಹೊಂದಿರಲಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 88 ಹಾರ್ಸ್ ಪವರ್ ಮತ್ತು 121.5 ಎನ್ಎಂ ಟಾರ್ಕ್ ಉತ್ಪಾದನೆನೊಂದಿಗೆ ಪ್ರತಿ ಕೆಜಿ ಸಿಎನ್ ಜಿಗೆ ಬರೋಬ್ಬರಿ 20.51 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.
ಟೊಯೊಟಾ ಕಂಪನಿಯು ಹೊಸ ರೂಮಿಯಾನ್ ರೀಬ್ಯಾಡ್ಜ್ ಆವೃತ್ತಿಯನ್ನು ಕೇವಲ ಭಾರತದಲ್ಲಿ ಮಾತ್ರವಲ್ಲ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ಪ್ರಮುಖ ರಾಷ್ಟ್ರಗಳಿಗೂ ರಫ್ತು ಮಾಡುವ ಯೋಜನೆ ಹೊಂದಿದ್ದು, ರಫ್ತುಗೊಳ್ಳುವ ರೂಮಿಯಾನ್ ಕಾರು ಭಾರತದಲ್ಲಿ ಮಾರಾಟಗೊಳ್ಳವ ಮಾದರಿಗಿಂತಲೂ ತುಸು ವಿಭಿನ್ನವಾದ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರಲಿದೆ.
ನೀರಿಕ್ಷಿತ ಬೆಲೆ(ಎಕ್ಸ್ ಶೋರೂಂ ದರ)
ಹೊಸ ರೂಮಿಯಾನ್ ಎಂಪಿವಿ ಕಾರು ಎರ್ಟಿಗಾ ಕಾರು ಮಾದರಿಗಿಂತ ತುಸು ದುಬಾರಿ ಎನ್ನಿಸಲಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 9 ಲಕ್ಷ ಆರಂಭಿಕ ಬೆಲೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುವ ಸಾಧ್ಯತೆಗಳಿದ್ದು, ಇದು ಟೊಯೊಟಾ ಕಂಪನಿಯ ಮಾರಾಟ ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ ರೀಬ್ಯಾಡ್ಜ್ ಆವೃತ್ತಿಯೊಂದಿಗೆ ಎರಡು ಕಂಪನಿಗಳಿಗೂ ಉತ್ತಮ ಆದಾಯ ಹರಿದುಬರುವ ನೀರಿಕ್ಷೆಯಿದೆ.