Video ನೋಡಿ: 8 ಕಿಮೀ ದೋರ ಓಡೋಡಿ ಹತ್ಯೆ ಆರೋಪಿಯ ಪತ್ತೆ ಹಚ್ಚಿದ ದಾವಣಗೆರೆಯ ಸ್ಟಾರ್ ಪೊಲೀಸ್ ಶ್ವಾನ! ಏನಿದರ ವಿಶೇಷ – Kannada News | Star police dog Tara of Davangere Police tracked down the murder accused after covering eight k m
ದಾವಣಗೆರೆ, ಆಗಸ್ಟ್ 10: ಬೆಂಗಳೂರಿನ ಅಡುಗೋಡಿಯಲ್ಲಿ ತರಬೇತಿ ಪಡೆದು ಇತ್ತೀಚಿಗೆ ತಾನೇ ದಾವಣಗೆರೆ ಕ್ರೈಂ ವಿಭಾಗಕ್ಕೆ (Davangere Police) ಸೇರ್ಪಡೆಯಾಗಿರುವ ಒಂಬತ್ತು ತಿಂಗಳ ವಯಸ್ಸಿನ ಪೊಲೀಸ್ ಶ್ವಾನ ತಾರಾ (Sniffer dog Tara) ಜಿಲ್ಲೆಯಲ್ಲಿ ಅದಾಗಲೇ ತನ್ನ ತಾಕತ್ತು ಓರೆಗೆ ಹಚ್ಚಿದೆ. ಕೊಲೆ ಆರೋಪಿಯೊಬ್ಬನನ್ನು ಜೈಲಿಗೆ ಅಟ್ಟಿ ಮಹತ್ವದ ಸಾಧನೆ ಮಾಡಿದೆ ತಾರಾ. ಬಿಲ್ಜಿಯಂ ಮೆಲೋನಿಸ್ (BELGIAN MOLINOIS DOG) ಎಂಬ ವಿಶಿಷ್ಟ ತಳಿಯ ಒಂಬತ್ತು ತಿಂಗಳ ಶ್ವಾನದ ಮಹತ್ವದ ಸಾಧನೆ ಇದಾಗಿದೆ.
ಹೌದು ಅತ್ಯಂತ ಸೂಕ್ಷ್ಮಗ್ರಹಿ ಶ್ವಾನ ತಾರಾ. ಅಮೆರಿಕಾ ಸೇರಿದಂತೆ ಬಹುತೇಕ ದೇಶಗಳಲ್ಲಿ ಪೊಲೀಸ್ ಹಾಗೂ ಸೇನೆಗಳಲ್ಲಿ ಬಳಕೆ ಆಗುವ ವಿಶಿಷ್ಟ ತಳಿಯದ್ದಾಗಿದೆ. ಪೊಲೀಸ್ ಕ್ರೈಂ ವಿಭಾಗದಲ್ಲಿ ಇಂತಹ ವಿಶಿಷ್ಟ ತಳಿ ಇರುವ ಏಕೈಕ ಪೊಲೀಸ್ ಶ್ವಾನ ಇದಾಗಿದೆ. ತಾರಾ ಈವರೆಗೆ 14 ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದೆ. ನಾಲ್ಕು ಪ್ರಕರಣಗಳ ಬಗ್ಗೆ ಮಹತ್ವದ ಸುಳಿವು ನೀಡಿದ್ದು, ಒಂದು ಕೊಲೆ ಪ್ರಕರಣವನ್ನು ಯಶಸ್ವಿಯಾಗಿ ಪತ್ತೆ ಹಚ್ಚಿದೆ ಶ್ವಾನ ತಾರಾ.
Also Read: ರಾಜ್ಯದಲ್ಲೇ ಅತಿ ಹೆಚ್ಚು ಸರ್ಕಾರಿ ಭೂಮಿ ಕಬಳಿಕೆ ಚಿಕ್ಕಮಗಳೂರಿನಲ್ಲಿ! 15 ತಹಶಿಲ್ದಾರ್ಗಳ ನೇತೃತ್ವದಲ್ಲಿ ತನಿಖೆ ಆರಂಭ
ದಾವಣಗೆರೆ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಕ್ರಾಸ್ ಬಳಿ ನರಸಿಂಹ (26) ಎಂಬ ಯುವಕನ ಕೊಲೆಯಾಗಿತ್ತು. ಪೊಲೀಸ್ ಶ್ವಾನ ತಾರಾ ಘಟನಾ ಸ್ಥಳದಿಂದ ನೇರವಾಗಿ ದಾವಣಗೆರೆ ನಗರದ ರಾಮನಗರದ ಅಂಜನೇಯ ದೇವಸ್ಥಾನದ ಪಕ್ಕದ ಮನೆಯ ವರೆಗೆ ಓಡಿ ಬಂದ ನಿಂತಿತು. ಯಾಕೆಂದರೆ ಕೊಲೆ ಆರೋಪಿ ಶಿವಯೋಗೇಶ್ ಅಲಿಯಾಸ್ ಯೋಗಿ ಮನೆ ಅದಾಗಿತ್ತು. ಅಲ್ಲಿಗೆ ಪೊಲೀಸ್ ಶ್ವಾನ ತಾರಾ ಘಟನಾ ಸ್ಥಳದಿಂದ ಬರೋಬ್ಬರಿ ಎಂಟು ಕಿಮೀ ದೂರ ಕ್ರಮಿಸಿ ಆರೋಪಿಯನ್ನು ಪತ್ತೆ ಹಚ್ಚಿದೆ. ಆರೋಪಿಯನ್ನು ಇಷ್ಟು ಸಲೀಸಾಗಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಶ್ವಾನ ತಾರಾ ಇದೀಗ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.