EBM News Kannada
Leading News Portal in Kannada

ಪುಟ್ಟ ಮನೆ, ಕಾರು ಬಿಟ್ಟು ಸಾವಿರಾರು ಕೋಟಿ ಮೌಲ್ಯದ ಆಸ್ತಿ ದಾನ; ಕೈಯಲ್ಲಿ ಮೊಬೈಲ್ ಫೋನ್ ಕೂಡ ಇಲ್ಲ; ಇದು ಶ್ರೀರಾಮ್ ಗ್ರೂಪ್ ಸ್ಥಾಪಕರ ಕಥೆ – Kannada News | Inspiring Story of Shriram Group Founder R Tyagarajan, Who Gave Away Most of His Wealth

0


Inspiring Story Of Shriram Group Founder: ಶ್ರೀರಾಮ್ ಗ್ರೂಪ್ ಸಂಸ್ಥಾಪಕ ಆರ್ ತ್ಯಾಗರಾಜನ್ ವಿಶೇಷ ವ್ಯಕ್ತಿತ್ವದವರು. ಶ್ರೀಮಂತರ ಉದ್ಧಾರದ ಬದಲು ಬಡವರ ಕಷ್ಟದ ಹೊರೆ ತಗ್ಗಿಸುವ ಚಿಂತನೆಯವರು. ಅಂತೆಯೇ ಇವತ್ತು ಅವರ ಸಂಸ್ಥೆ ಕೆಳ ಮಧ್ಯಮ ವರ್ಗದವರಿಗೆ ಸಾಲ ಕೊಡುತ್ತದೆ.

ಪುಟ್ಟ ಮನೆ, ಕಾರು ಬಿಟ್ಟು ಸಾವಿರಾರು ಕೋಟಿ ಮೌಲ್ಯದ ಆಸ್ತಿ ದಾನ; ಕೈಯಲ್ಲಿ ಮೊಬೈಲ್ ಫೋನ್ ಕೂಡ ಇಲ್ಲ; ಇದು ಶ್ರೀರಾಮ್ ಗ್ರೂಪ್ ಸ್ಥಾಪಕರ ಕಥೆ

ಶ್ರೀರಾಮ್ ಗ್ರೂಪ್​ನ ಆರ್ ತ್ಯಾಗರಾಜನ್

ಶ್ರೀರಾಮ್ ಗ್ರೂಪ್ ಹೆಸರು ಕೇಳದವರು ಬಹಳ ಕಡಿಮೆ. ಭಾರತದ ಅತಿದೊಡ್ಡ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಅದೂ ಒಂದು. ಅನೇಕ ಮಂದಿ ಕೆಳಮಧ್ಯಮ ವರ್ಗದ ಜನರು, ಕಾರ್ಮಿಕರು, ರಸ್ತೆಬದಿ ವ್ಯಾಪಾರಿಗಳು, ಸಣ್ಣಪುಟ್ಟ ಅಂಗಡಿಯವರಿಗೆ ಶ್ರೀರಾಮ್ ಗ್ರೂಪ್ (Shriram Group) ಒಂದು ಆಶಾಕಿರಣದಂತೆ ಇದೆ. ಸಣ್ಣ ಆದಾಯದ ವ್ಯಕ್ತಿಗಳಿಗೆ ಬ್ಯಾಂಕುಗಳಲ್ಲಿ ಸಾಲ ಸಿಗುವುದಿಲ್ಲ. ಅಂಥವರಿಗೆ ದಾರಿ ಇರುವುದು ಶ್ರೀರಾಮ್ ಗ್ರೂಪ್. ಇವತ್ತು ಈ ಸಂಸ್ಥೆಯ ಆದಾಯ 1 ಲಕ್ಷಕೋಟಿ ರುಪಾಯಿಗೂ ಹೆಚ್ಚಿದೆ. 1 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗಿಗಳಿಗೆ ಕೆಲಸ ಕೊಟ್ಟಿರುವ ಶ್ರೀರಾಮ್ ಗ್ರೂಪ್​ನ ಮಾಲೀಕ ಆರ್ ತ್ಯಾಗರಾಜನ್ (R Tyagarajan) ಅವರದ್ದು ಇನ್ನೊಂದು ವಿಶೇಷ ವ್ಯಕ್ತಿತ್ವ. ತ್ಯಾಗರಾಜನ್ ತನ್ನಲ್ಲಿರುವ ಬಹುತೇಕ ಆಸ್ತಿಯನ್ನು ದಾನ ಮಾಡಿದಂಥವರು. ಇರುವುದಕ್ಕೆ ಒಂದು ಪುಟ್ಟ ಮನೆ, ಓಡಾಟಕ್ಕೆ ಸಾಧಾರಣ ಕಾರು. ಇಷ್ಟಕ್ಕೇ ತೃಪ್ತಿಪಟ್ಟು ಜೀವನ ನಡೆಸುತ್ತಿದ್ದಾರೆ 86 ವರ್ಷದ ತ್ಯಾಗರಾಜನ್.

ಬಡವರ ಕಷ್ಟದ ಹೊರೆ ತಗ್ಗಿಸುವುದು ಗುರಿ

ಆರ್ ತ್ಯಾಗರಾಜನ್ ತನ್ನನ್ನು ತಾನು ಎಡಪಂಥೀಯ ಎಂದು ಕರೆದುಕೊಳ್ಳುತ್ತಾರೆ. ‘ಈಗಾಗಲೇ ಒಳ್ಳೆಯ ಜೀವನ ನಡೆಸುತ್ತಿರುವ ಜನರ ಜೀವನವನ್ನು ಇನ್ನಷ್ಟು ಒಳ್ಳೆಯದು ಮಾಡುವ ಆಸಕ್ತಿ ನನಗಿಲ್ಲ. ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಜನರ ಕಷ್ಟದ ಹೊರೆ ತಗ್ಗಿಸುವ ಆಸಕ್ತಿ ನನಗಿದೆ’ ಎಂದು ಹೇಳುವ ಮಹಾನುಭಾವ ತ್ಯಾಗರಾಜನ್.

ಅಂತೆಯೇ, ಇವರ ಬ್ಯುಸಿನೆಸ್ ಮಾಡೆಲ್ ನಿಂತಿರುವುದೇ ಬಡವರಿಗೆ ಆಧಾರವಾಗಿ. 1974ರಲ್ಲಿ ಆರಂಭವಾದ ಶ್ರೀರಾಮ್ ಗ್ರೂಪ್​ನ ಕಂಪನಿಗಳು ಕೆಳ ವರ್ಗದ ಸಮುದಾಯಗಳಿಗೆ ಹಣಕಾಸು ಸಾಲದ ನೆರವಿನ ಮೂಲಕ ಅವರ ಬದುಕಲ್ಲಿ ಒಂದಿಷ್ಟು ಸಕಾರಾತ್ಮಕ ಬದಲಾವಣೆ ತರುತ್ತಿವೆ. ಒಂದು ಕಡೆ ಬ್ಯಾಂಕುಗಳಲ್ಲಿ ಇವರಿಗೆ ಸಾಲ ಸಿಕ್ಕೋದಿಲ್ಲ. ಇನ್ನೊಂದು ಕಡೆ ಖಾಸಗಿ ಫೈನಾನ್ಷಿಯರುಗಳಿಂದ ರಕ್ತಹೀರುವ ಜಿಗಣೆಯಂತೆ ವಿಪರೀತ ಬಡ್ಡಿಗೆ ಸಾಲ ಪಡೆಯಬೇಕು. ಹಣಕಾಸು ಅಗತ್ಯ ಇರುವ, ಆದರೆ ಹೆಚ್ಚು ಆದಾಯ ಇರದ ಬಡವರಿಗೆ ಶ್ರೀರಾಮ್ ಗ್ರೂಪ್​ನಿಂದ ಕಡಿಮೆ ಬಡ್ಡಿದರಕ್ಕೆ ಸಾಲ ಸಿಗುತ್ತದೆ.

ಶ್ರೀರಾಮ್ ಗ್ರೂಪ್​ನ ಪ್ರೇರಣೆಯಿಂದ ಇವತ್ತು ಆ ಹಣಕಾಸು ಉದ್ಯಮ ದೊಡ್ಡದಾಗಿ ಬೆಳೆದಿದೆ. ಮುಖ್ಯವಾಹಿನಿ ಬ್ಯಾಂಕುಗಳು ಸಾಲ ಕೊಡದ ಕೆಳ ಆದಾಯದ ಜನರಿಗೆ ಈಗ ಸಾಲಕ್ಕೆ ಆಯ್ಕೆಗಳಿವೆ. ಇದಕ್ಕೆ ಕಾರಣವೇ ಆರ್ ತ್ಯಾಗರಾಜನ್ ಅವರ ಸಾಹಸ. ಕಡಿಮೆ ಆದಾಯ ವರ್ಗದವರಿಗೆ ಸಾಲ ಕೊಟ್ಟರೆ ನಷ್ಟ ಖಚಿತ ಎನ್ನುವ ಧೋರಣೆಯನ್ನು ತ್ಯಾಗರಾಜನ್ ಸುಳ್ಳಾಗಿಸಿದ್ದಾರೆ.

6,000 ಕೋಟಿ ರೂ ದಾನ ಮಾಡಿದ ತ್ಯಾಗರಾಜನ್

ಆರ್ ತ್ಯಾಗರಾಜನ್ ಅವರು ತಮ್ಮ ಬಹುತೇಕ ಆಸ್ತಿಯನ್ನು ದಾನ ಮಾಡಿದ್ದಾರೆ. ಇವತ್ತು ಶ್ರೀರಾಮ್ ಗ್ರೂಪ್ ಲಕ್ಷಾಂತರ ಕೋಟಿ ರೂ ಷೇರುಸಂಪತ್ತು ಇರುವ ಕಂಪನಿಯಾಗಿದೆ. ಈ ಕಂಪನಿಯಲ್ಲಿದ್ದ ಷೇರು ಒಡೆತನವನ್ನು ಇವರು ಬಿಟ್ಟುಕೊಟ್ಟಿದ್ದಾರೆ. 6,000 ಕೋಟಿ ರೂಗೂ ಹೆಚ್ಚು ಮೊತ್ತದ ಸಂಪತ್ತನ್ನು ಕೆಲ ಉದ್ಯೋಗಿಗಳಿಗೆ ದಾನ ಮಾಡಿಬಿಟ್ಟಿದ್ದಾರೆ. ಈಗ ಇವರ ಬಳಿ ಇರುವುದು ಒಂದು ಪುಟ್ಟ ಮನೆ ಮತ್ತು ಕಾರು ಮಾತ್ರ. ಇದು ಅವರ ಪ್ರಕಾರ ಸೋಷಿಯಲಿಸ್ಟ್ ಬದುಕು.

ಕಡಿಮೆ ಸಂಬಳ ಇದ್ದರೂ ಶ್ರೀರಾಮ್ ಗ್ರೂಪ್ ಉದ್ಯೋಗಿಗಳು ತೃಪ್ತ

ಶ್ರೀರಾಮ್ ಗ್ರೂಪ್​ನಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಾರೆ. ಮಾಮೂಲಿಯ ಫೀಲ್ಡ್ ಎಕ್ಸಿಕ್ಯೂಟಿವ್​ನಿಂದ ಹಿಡಿದು ಮ್ಯಾನೇಜರ್​ವರೆಗೂ ಎಲ್ಲರಿಗೂ ಕೂಡ ಕಡಿಮೆ ಸಂಬಳವೇ. ಬೇರೆ ಪ್ರಮುಖ ಬ್ಯಾಂಕುಗಳಲ್ಲಿ ಕೊಡುವುದಕ್ಕಿಂತ ಶೇ. 30ಕ್ಕಿಂತಲೂ ಕಡಿಮೆ ಸಂಬಳ ಸಿಗುತ್ತದೆ. ಆದರೂ ಕೂಡ ಯಾವ ಉದ್ಯೋಗಿಯೂ ಅಸಮಾಧಾನಗೊಂಡಿಲ್ಲ. ಬೇರೆಡೆಯಲ್ಲಿರುವಂತೆ ಒತ್ತಡದ ಕೆಲಸ ಇಲ್ಲಿಲ್ಲ. ಕೆಲಸದ ವಾತಾವರಣದಲ್ಲಿ ಮಾನವೀಯತೆ ಇದೆ. ಹೀಗಾಗಿ, ಇಲ್ಲಿ ಕೆಲಸ ಮಾಡಲು ತೃಪ್ತಿ ಇದೆ ಎನ್ನುತ್ತಾರೆ ಇಲ್ಲಿನ ಉದ್ಯೋಗಿಗಳು.

ಮಾಲೀಕ ತ್ಯಾಗರಾಜನ್ ಅವರು ಉದ್ಯೋಗಿಗಳಿಗೆ ಕಡಿಮೆ ಸಂಬಳ ಕೊಡುವುದನ್ನು ಸಮರ್ಥಿಸಿಕೊಳ್ಳುತ್ತಾರೆ. ಕೆಲಸಗಾರರು ತೃಪ್ತಿ ಜೀವನ ನಡೆಸಲು ಎಷ್ಟು ಹಣ ಅವಶ್ಯಕವೋ ಅಷ್ಟನ್ನು ಕೊಡುತ್ತೇವೆ ಎನ್ನುತ್ತಾರೆ.

ಸರಳ ವ್ಯಕ್ತಿತ್ವದ ತ್ಯಾಗರಾಜನ್

ಆರ್ ತ್ಯಾಗರಾಜನ್ ಅವರು ಶ್ರೀರಾಮ್ ಗ್ರೂಪ್​ನ ವಿವಿಧ ಕಂಪನಿಗಳಲ್ಲಿರುವ ತಮ್ಮೆಲ್ಲಾ ಷೇರು ಪಾಲನ್ನು ಶ್ರೀರಾಮ್ ಓನರ್​ಶಿಪ್ ಟ್ರಸ್ಟ್​ಗೆ ವರ್ಗಾಯಿಸಿದ್ದಾರೆ. ಈ ಟ್ರಸ್ಟ್​ನಲ್ಲಿ 44 ಮಂದಿ ಉದ್ಯೋಗಿಗಳಿದ್ದು ಅವರೆಲ್ಲರಿಗೂ ಇವರ ಪಾಲಿನ ಷೇರುಗಳು ಹಂಚಿಕೆಯಾಗಿವೆ. ಇವತ್ತು ಆ ಟ್ರಸ್ಟ್​ನ ಮೌಲ್ಯ 6,000 ಕೋಟಿ ರೂಗೂ ಹೆಚ್ಚಿದೆ.

ತ್ಯಾಗರಾಜನ್ ಅವರ ಬಳಿಕ ಇವತ್ತು ಒಂದು ಪುಟ್ಟ ಮನೆ ಇದೆ. ಹ್ಯುಂಡೈ ಐ20 ಕಾರು ಹೊಂದಿದ್ದಾರೆ. ಆದರೆ, ಇವರ ಬಳಿ ಒಂದು ಮೊಬೈಲ್ ಫೋನ್ ಕೂಡ ಇಲ್ಲ ಎಂದರೆ ನೀವು ಅಚ್ಚರಿ ಪಡಬಹುದು. ಮೊಬೈಲ್ ಫೋನ್ ಇದ್ದರೆ ನೆಮ್ಮದಿ ಹಾಳು ಎಂಬ ಸಿದ್ಧಾಂತದವರು ಇವರು. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇವರು, ತನಗೆ ವೈಯಕ್ತಿಕವಾಗಿ ಹಣದ ಅಗತ್ಯ ಆಗಲೂ ಇರಲಿಲ್ಲ, ಈಗಲೂ ಇಲ್ಲ ಎಂದು ಹೇಳುತ್ತಾರೆ.

ಶ್ರೀರಾಮ್ ಗ್ರೂಪ್​ನ ವ್ಯವಹಾರದಿಂದ ನಿವೃತ್ತರಾಗಿರುವ ಟಿ ತ್ಯಾಗರಾಜನ್ ಈಗ ಸಲಹೆಗಾರರಾಗಿ ಮಾತ್ರ ಜವಾಬ್ದಾರಿ ಹೊಂದಿದ್ದಾರೆ. 86 ವರ್ಷದ ಇವರು ತಮ್ಮ ವಿಶ್ರಾಂತ ಜೀವನದಲ್ಲಿ ಶಾಸ್ತ್ರೀಯ ಸಂಗೀತ ಕೇಳುತ್ತಾ ಕಾಲಕ್ಷೇಪ ಮಾಡುತ್ತಾರೆ.

ತಾಜಾ ಸುದ್ದಿ

Leave A Reply

Your email address will not be published.