Friendship Day 2023: ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಏಕೆ ಆಚರಿಸಲಾಗುತ್ತದೆ? ಇದರ ಹಿನ್ನೆಲೆ ಇಲ್ಲಿದೆ – Kannada News | Why is friends day celebrated on the first sunday of august learn about its background lifestyle news mda
ಜೀವನದಲ್ಲಿ ಏನೇ ಕಷ್ಟ ಬಂದರೂ ಮೊದಲಿಗೆ ನೆನಪಾಗುವುದೇ ಸ್ನೇಹಿತರು. ಏಕೆಂದರೆ ಕುಟುಂಬವನ್ನು ಹೊರತುಪಡಿಸಿ ಸ್ನೇಹಿತರು ಮಾತ್ರ ನಮ್ಮ ಪ್ರತಿಯೊಂದು ಕಷ್ಟದಲ್ಲೂ ಬೆನ್ನೆಲುಬಾಗಿ ನಿಲ್ಲುತ್ತಾರೆ. ಇಂತಹ ಸ್ವಾರ್ಥವಿಲ್ಲದ ಸಂಬಂಧದ ಪ್ರಾಮುಖ್ಯತೆಯನ್ನು ಸಾರಲು ಪ್ರತಿವರ್ಷ ಅಂತರಾಷ್ಟ್ರೀಯ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆಯ ಹಿನ್ನೆಲೆ ಏನೆಂಬುದನ್ನು ನೋಡೋಣ.
ಸಾಂದರ್ಭಿಕ ಚಿತ್ರ
ಸ್ನೇಹ ಜೀವನದ ಅತ್ಯಂತ ಸುಂದರ ಬಂಧ. ಸಂತೋಷವಾಗಲಿ ಅಥವಾ ದುಃಖವಾಗಲಿ ನಿಮ್ಮೊಂದಿಗೆ ಸದಾ ಜೊತೆಗಿರುವವರು ಸ್ನೇಹಿತರು. ನಿಜವಾದ ಸ್ನೇಹಿತ ಎಂದಿಗೂ ನಿಮ್ಮನ್ನು ನಡು ನೀರಿನಲ್ಲಿ ಕೈ ಬಿಡಲಾರ. ನಿಮ್ಮ ಜೀವನದ ಕಠಿಣ ಸಮಯದಲ್ಲೂ ಆತ ನಿಮಗೆ ಬೆನ್ನೆಲುಬಾಗಿ ನಿಲ್ಲುತ್ತಾನೆ. ಅದಕ್ಕಾಗಿಯೇ ಸ್ನೇಹಿತರಿಲ್ಲದೆ ಜೀವನ ಅಪೂರ್ಣ ಎಂದು ಹೇಳಲಾಗುತ್ತದೆ. ಈ ಸುಂದರ ಸಂಬಂಧದ ಮಹತ್ವವನ್ನು ಸಾರಲು ಪ್ರತಿವರ್ಷ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಸಂಸ್ಥೆಯು ಜುಲೈ 30 ರಂದು ಅಂತರಾಷ್ಟ್ರೀಯ ಸ್ನೇಹಿತರ ದಿನವೆಂದು ಘೋಷಿಸಿದೆ. ಆದರೆ ಭಾರತ, ಅಮೇರಿಕಾ, ಬಾಂಗ್ಲಾದೇಶ, ಮಲೇಷ್ಯಾ ಸೇರಿದಂತೆ ಇನ್ನೂ ಕೆಲವು ರಾಷ್ಟ್ರಗಳಲ್ಲಿ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಈ ನಿರ್ಧಿಷ್ಟ ದಿನದಂದು ಸ್ನೇಹಿತರ ದಿನವನ್ನು ಆಚರಿಸಲು ಕಾರಣವೇನು ಎಂಬ ಮಾಹಿತಿಯನ್ನು ತಿಳಿಯಿರಿ.
ಸ್ನೇಹಿತರ ದಿನದ ಆಚರಣೆಯ ಇತಿಹಾಸ:
ಜುಲೈ 30, 1958 ರಂದು ಮೊದಲ ಬಾರಿಗೆ ಅಂತರಾಷ್ಟ್ರೀಯ ಸ್ನೇಹ ದಿನವನ್ನು ಆಚರಿಸಲಾಯಿತು. ಇದನ್ನು ಅಂತರಾಷ್ಟ್ರೀಯ ನಾಗರಿಕ ಸಂಸ್ಥೆಯಾದ ವರ್ಲ್ಡ್ ಫ್ರೆಂಡ್ ಶಿಪ್ ಕ್ರುಸೇಡ್ ಪ್ರಸ್ತಾಪಿಸಿದೆ. ಅಧೀಕೃತವಾಗಿ ಅಂತರಾಷ್ಟ್ರೀಯ ಸ್ನೇಹಿತರ ದಿನವನ್ನು ವಿಶ್ವಸಂಸ್ಥೆಯು 2011 ರಿಂದ ಆರಂಭಿಸಿತು. ಸ್ನೇಹ ಮತ್ತು ಅದರ ಪ್ರಾಮುಖ್ಯತೆಯನ್ನು ಬಲಪಡಿಸುವ ಮತು ಸ್ನೇಹ ಸಂಬಂಧದ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆಯು ಜುಲೈ 30 ರಂದು ಈ ದಿನವನ್ನು ಆಚರಿಸಲು ನಿರ್ಧರಿಸಿತು. ಆದರೆ ಭಾರತ, ಅಮೇರಿಕಾ, ಮಲೇಷ್ಯಾ ಸೇರಿದಂತೆ ಇನ್ನಿತರ ರಾಷ್ಟ್ರಗಳಲ್ಲಿ ಸ್ನೇಹಿತರ ದಿನವನ್ನು ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ.
ಆಗಸ್ಟ್ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸಲು ಕಾರಣವೇನು?
ಭಾರತ, ಅಮೇರಿಕಾ ಸೇರಿದಂತೆ ಇನ್ನೂ ಕೆಲವು ರಾಷ್ಟ್ರಗಳಲ್ಲಿ ಸ್ನೇಹಿತರ ದಿನವನ್ನು ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ. ಏಕೆಂದರೆ 1935ರಲ್ಲಿ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಅಮೇರಿಕಾ ಸರ್ಕಾರವು ಒಬ್ಬ ವ್ಯಕ್ತಿಯನ್ನು ಕೊಲ್ಲುತ್ತದೆ. ಈ ವ್ಯಕ್ತಿಯ ಸಾವಿನ ಸಂಗತಿಯನ್ನು ತಿಳಿದ ಆತನ ಆತ್ಮೀಯ ಸ್ನೇಹಿತ ದುಃಖವನ್ನು ತಾಳಲಾರದೇ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇವರ ಈ ಸ್ನೇಹಬಂಧವನ್ನು ಕಂಡು ಅಮೇರಿಕಾ ಸರ್ಕಾರವು ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸಲು ಘೋಷಿಸಿತು. ಕ್ರಮೇಣ ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಲಿತಕ್ಕೆ ಬಂದಿತು. ಪ್ರಸ್ತುತ ಭಾರತದಲ್ಲಿಯೂ ಸ್ನೇಹಿತರ ದಿನವನ್ನು ಆಚರಿಸಲಾಗುತ್ತಿದೆ.
ಸ್ನೇಹಿತರ ದಿನದ ಆಚರಣೆಯ ಮಹತ್ವ ಪ್ರಾಮುಖ್ಯತೆ:
ಸ್ನೇಹ ಸಂಬಂಧ ಜಾತಿ, ಧರ್ಮ, ಲಿಂಗ, ರಾಷ್ಟ್ರೀಯತೆಯ ಗಡಿಗಳನ್ನು ಮೀರಿದ್ದು, ಈ ಸಂಬಂಧದಲ್ಲಿ ಯಾವುದೇ ಭೇದಭಾವವನ್ನು ನಾವು ಕಾಣಲು ಸಾಧ್ಯವಿಲ್ಲ. ಅದಕ್ಕಾಗಿಯೇ ಗೆಳೆತನವನ್ನು ಪ್ರಪಂಚದ ಪವಿತ್ರ ಸಂಬಂಧ ಎಂದು ಕರೆಯುವುದು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದಲ್ಲಿ ಸ್ನೇಹಿತರನ್ನು ಹೊಂದಿರುತ್ತಾನೆ. ಜನರು ಇಂದು ತಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚು ನಿರತರಾಗಿದ್ದಾರೆ. ಈ ಕಾರಣದಿಂದ ಸ್ನೇಹಿತರೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ, ಈ ಸ್ನೇಹಿತರ ದಿನದಂದು ಸ್ನೇಹಿತರು ಜೊತೆಯಾಗಿ ಪಾರ್ಟಿ ಅಥವಾ ಪ್ರವಾಸ ಹೋಗುವ ಮೂಲಕ ತಮ್ಮ ಸ್ನೇಹವನ್ನು ಇನ್ನಷ್ಟು ಬಲಪಡಿಸಬಹುದು. ಮತ್ತು ನಿಮಗೆ ಸದಾ ಕಾಲ ಬೆನ್ನೆಲುಬಾಗಿರುವ ಸ್ನೇಹಿತರಿಗೆ ಕೃತಜ್ಞತೆ ಸಲ್ಲಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಜೀವನಶೈಲಿಗೆ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ