EBM News Kannada
Leading News Portal in Kannada

ಕೆನಡಾದಲ್ಲಿ ಬ್ಯಾರಿ ಯುವಕರಿಂದ ‘ಬ್ಯಾರೀಸ್ ಸೂಪರ್ ಮಾರ್ಕೆಟ್’ ಆರಂಭ

0


ಟೊರೊಂಟೊ: ಕೆನಡಾದಲ್ಲಿ ಮಂಗಳೂರಿನ ಮೂವರು ಬ್ಯಾರಿ ಯುವಕರು ಹೊಸ ಸಂಸ್ಥೆಯೊಂದನ್ನು ಪ್ರಾರಂಭಿಸುತ್ತಿದ್ದಾರೆ. ಅದಕ್ಕೆ ಬ್ಯಾರೀಸ್ ಸೂಪರ್ ಮಾರ್ಕೆಟ್ ಎಂದೇ ಹೆಸರಿಟ್ಟಿದ್ದಾರೆ. ಕೆನಡಾದ ಟೊರೊಂಟೊದ ಮಿಸ್ಸಿಸಗಾದಲ್ಲಿ ಶನಿವಾರ ಬ್ಯಾರೀಸ್‌ ಸೂಪರ್‌ ಮಾರ್ಕೆಟ್ ಆರಂಭಗೊಂಡಿದ್ದು ಕೆನಡಾದಲ್ಲಿರುವ ಮಂಗಳೂರಿಗರಿಗೆ ಇದೊಂದು ಶುಭ ಸುದ್ದಿ.

ಬ್ಯಾರೀಸ್ ಸೂಪರ್‌ ಮಾರ್ಕೆಟ್‌ ನ್ನು ಮಂಗಳೂರಿನ ಕಚ್‌ ಮನ್‌ ಹೌಸ್‌ ನ ಹನೀಫ್‌ ಅವರ ಪುತ್ರರಾದ ಹಫೀಝ್ ಅಬ್ದುಲ್ ಖಾದರ್, ಹುಸೈನ್‌(ಯೆರ್ಚಿರೊ ಉಚ್ಚಾಕ) ಅವರ ಪುತ್ರರಾದ ಮುನೀರ್ ಅಹ್ಮದ್, ಡಾ. ಅಶ್ರಫ್‌ ಅವರ ಪುತ್ರರಾದ ಹಾಶಿಮ್ ಅಶ್ರಫ್ ಅವರು ಜೊತೆಗೂಡಿ ಪ್ರಾರಂಭಿಸಿದ್ದಾರೆ. ಹಫೀಝ್ ಅಬ್ದುಲ್ ಖಾದರ್ ಮಂಗಳೂರಿನ ಹಿರಿಯ ಪತ್ರಕರ್ತ, ಛಾಯಾಗ್ರಾಹಕ ದಿವಂಗತ ಅಹ್ಮದ್ ಅನ್ವರ್ ಅವರ ಅಳಿಯ. ಉದ್ಯಮ, ಆಹಾರ ಕ್ಷೇತ್ರ ಹಾಗು ಗ್ರಾಹಕ ಸೇವೆಯಲ್ಲಿ ಅನುಭವ ಇರುವ ಈ ಮೂವರು ಮಿತ್ರರು ಸೇರಿ ಕೆನಡಾದಲ್ಲಿರುವ ಮಂಗಳೂರು ಸುತ್ತಮುತ್ತಲ ಜನರಿಗೆ ಅವರ ತವರಿನ ತಿಂಡಿ, ತಿನಿಸುಗಳು, ಮಸಾಲೆ ಪದಾರ್ಥಗಳನ್ನು ಒದಗಿಸುವ ಜೊತೆಗೆ ಕೆನಡಾದ ಜನತೆಗೂ ತುಳುನಾಡಿನ ಆಹಾರ ಸಂಸ್ಕೃತಿಯನ್ನು ಪರಿಚಯಿಸಲು ಹೊರಟಿದ್ದಾರೆ.

ಬ್ಯಾರೀಸ್ ಸೂಪರ್ ಮಾರ್ಕೆಟ್ ನಲ್ಲಿ ದಿನಸಿ ವಸ್ತುಗಳು, ಕರಾವಳಿಯ ನೆಚ್ಚಿನ ಖಾದ್ಯಗಳು ಲಭ್ಯವಾಗಲಿವೆ. ಗ್ರಾಹಕರಿಗೆ ಅಗತ್ಯ ಅಡುಗೆ ಸಾಮಾಗ್ರಿಗಳು, ಮಸಾಲೆ ಪದಾರ್ಥಗಳು ಸಿಗಲಿವೆ. ಜೊತೆಗೆ ಮಂಗಳೂರಿನ ಹೆಸರಾಂತ ಖಾದ್ಯಗಳಾದ ಸುಕ್ಕ, ಪುಳಿಮುಂಚಿ, ಕೋರಿ ರೊಟ್ಟಿ, ಗೋಳಿ ಬಜೆ, ಮಂಗಳೂರು ಬನ್ಸ್, ಪತ್ರೋಡೆ, ನೀರು ದೋಸೆ, ಖಾರಾ ರೊಟ್ಟಿ, ಬಾಳೆಹಣ್ಣಿನ ವಿವಿಧ ಖಾದ್ಯಗಳು ಸಿಗಲಿವೆ. ಬ್ಯಾರೀಸ್ ಸೂಪರ್‌ ಮಾರ್ಕೆಟ್ ಮಂಗಳೂರಿಗರಿಗೆ ರೆಡಿ ಟು ಈಟ್ ಖಾದ್ಯಗಳ ಜೊತೆಗೆ ಕರಾವಳಿ ಕರ್ನಾಟಕದ ವಿಶಿಷ್ಟ ರುಚಿಯ ಖಾದ್ಯಗಳನ್ನು ಕೆನಡಾದ ಜನರಿಗೆ ಪರಿಚಯಿಸಲಿದೆ.

ಬ್ಯಾರೀಸ್ ಸೂಪರ್‌ ಮಾರ್ಕೆಟ್ ಕೇವಲ ವ್ಯವಹಾರಕ್ಕೆ ಸೀಮಿತವಾಗಿಲ್ಲ. ಇದು ಸಾಂಸ್ಕೃತಿಕ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ ಎಂದು ಇದರ ಪಾಲುದಾರರು ಹೇಳಿದ್ದಾರೆ. ಈ ಸೂಪರ್ ಮಾರ್ಕೆಟ್ ನಲ್ಲಿ ಟೊರಂಟೊದಲ್ಲಿರುವ ಮಂಗಳೂರು ಸುತ್ತಮುತ್ತಲ ಜನರು ಒಂದೆಡೆ ಸೇರಿ ಪರಸ್ಪರ ಕುಶಲೋಪರಿ ನಡೆಸಬಹುದು ಹಾಗು ವಿಷಯ ವಿನಿಮಯ ಮಾಡಿಕೊಳ್ಳಬಹುದಾಗಿದೆ.

ಬ್ಯಾರೀಸ್ ಸೂಪರ್ ಮಾರ್ಕೆಟ್ ನ ಪ್ರಾರಂಭವು ಕೆನಡಾದಲ್ಲಿ ಹೆಚ್ಚುತ್ತಿರುವ ಬ್ಯಾರಿ ಸಮುದಾಯಕ್ಕೂ ಮಹತ್ವದ ಮೈಲಿಗಲ್ಲಾಗಿದೆ. ಕೆನಡಾದಲ್ಲಿ ಬ್ಯಾರಿಗಳ ಸಂಖ್ಯೆ ಹೆಚ್ಚುತ್ತಿದ್ದು ಒಂದು ಬ್ಯಾರಿ ಅಸೋಸಿಯೇಷನ್ ಆಫ್ ಕೆನಡಾ ಕೂಡ ಪ್ರಾರಂಭವಾಗಿದೆ. ಈ ಬ್ಯಾರಿ ಅಸೋಸಿಯೇಷನ್ ಅಲ್ಲಿರುವ ಬ್ಯಾರಿಗಳ ಸಮ್ಮಿಲನ ಹಾಗು ಬ್ಯಾರಿ ಸಾಹಿತ್ಯ, ಸಂಸ್ಕೃತಿಯನ್ನು ಪ್ರೋತ್ಸಾಹಿಸಿ ಬೆಳೆಸುವ ಕೆಲಸ ಮಾಡುತ್ತಿದೆ. ಹೊರದೇಶದಲ್ಲಿದ್ದುಕೊಂಡು ಮಂಗಳೂರಿನ ಆಹಾರ ಸಂಸ್ಕೃತಿಯನ್ನು ಆಸ್ವಾದಿಸಲು ಹವಣಿಸುವವರಿಗೆ, ಬ್ಯಾರೀಸ್ ಸೂಪರ್ ಮಾರ್ಕೆಟ್ ಸ್ವಾದಿಷ್ಠ ಖಾದ್ಯಗಳನ್ನು ಉಣಬಡಿಸಲಿದೆ.

Leave A Reply

Your email address will not be published.