EBM News Kannada
Leading News Portal in Kannada

ಸಿರಿಯಾದ ಮಧ್ಯಂತರ ಅಧ್ಯಕ್ಷರಾಗಿ ಅಹ್ಮದ್ ಅಲ್-ಶರಾ ಆಯ್ಕೆ

0


ದಮಾಸ್ಕಸ್: ಬಶರ್ ಅಲ್-ಅಸ್ಸಾದ್ ಆಡಳಿತವನ್ನು ಪದಚ್ಯುತಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಬಂಡುಕೋರ ಗುಂಪು ತಹ್ರೀರ್ ಅಲ್-ಶಾಮ್(ಎಚ್‍ಟಿಎಸ್)ನ ಮುಖಂಡ ಅಹ್ಮದ್ ಅಲ್-ಶರಾ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಮತ್ತು ಪರಿವರ್ತನೆಯ ಶಾಸಕಾಂಗವನ್ನು ರಚಿಸುವ ಕಾರ್ಯವನ್ನು ಅವರಿಗೆ ವಹಿಸಲಾಗಿದೆ ಎಂದು ಸಿರಿಯಾದ ಅಧಿಕಾರಿಗಳನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.

ಶರಾ ಅವರ ನೇತೃತ್ವದಲ್ಲಿ ಬಂಡುಕೋರ ಒಕ್ಕೂಟವು ಡಿಸೆಂಬರ್ 8ರಂದು ಅಸ್ಸಾದ್ ಅವರನ್ನು ಪದಚ್ಯುತಗೊಳಿಸಿದ ಬಳಿಕ ಮಾರ್ಚ್ 1ರವರೆಗೆ ದೇಶವನ್ನು ನಡೆಸಲು ಪರಿವರ್ತನೆಯ ಸರಕಾರವನ್ನು ಸ್ಥಾಪಿಸಲಾಗಿತ್ತು. ಪರಿವರ್ತನೆಯ ಹಂತದಲ್ಲಿ ದೇಶದ ಅಧ್ಯಕ್ಷರನ್ನಾಗಿ ಶರಾ ಅವರನ್ನು ನೇಮಿಸಲಾಗಿದ್ದು ಅವರು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ದೇಶಕ್ಕೆ ಶಾಶ್ವತ ಸಂವಿಧಾನವನ್ನು ನಿರ್ಧರಿಸುವವರೆಗೆ ತಾತ್ಕಾಲಿಕ ಶಾಸಕಾಂಗ ಮಂಡಳಿಯನ್ನು ರಚಿಸುವ ಜವಾಬ್ದಾರಿಯನ್ನು ಶರಾ ನಿರ್ವಹಿಸಲಿದ್ದಾರೆ ಎಂದು ಮಿಲಿಟರಿ ಅಧಿಕಾರಿ ಹಸನ್ ಅಬ್ದೆಲ್ ಘನಿ ಅವರನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ `ಸನಾ’ ಸುದ್ದಿಸಂಸ್ಥೆ ವರದಿ ಮಾಡಿದೆ.

ಅಸಾದ್ ಯುಗದ ಸಂಸತ್ತನ್ನು ವಿಸರ್ಜಿಸಲಾಗಿದೆ ಮತ್ತು 2012ರ ಸಂವಿಧಾನವನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ ಅಸ್ಸಾದ್ ಪದಚ್ಯುತಿಯಲ್ಲಿ ಒಳಗೊಂಡಿದ್ದ ಎಲ್ಲಾ ಸಶಸ್ತ್ರ ಗುಂಪುಗಳನ್ನೂ , ಮಾಜಿ ಸರಕಾರದ ಸೇನೆ ಮತ್ತು ಭದ್ರತಾ ಏಜೆನ್ಸಿಗಳನ್ನೂ ವಿಸರ್ಜಿಸಲಾಗಿದೆ. ಎಲ್ಲಾ ಮಿಲಿಟರಿ ಬಣಗಳು ಮತ್ತು ನಾಗರಿಕ ಕ್ರಾಂತಿಕಾರಿ ಸಂಸ್ಥೆಗಳನ್ನು ವಿಸರ್ಜಿಸಿ ಸರಕಾರದ ಸಂಸ್ಥೆಗಳಲ್ಲಿ ವಿಲೀನಗೊಳಿಸಲಾಗಿದೆ. ಎಂದು ಅಬ್ದೆಲ್ ಘನಿ ಘೋಷಿಸಿದ್ದಾರೆ. ಪದಚ್ಯುತ ಆಡಳಿತದ ಸೇನೆ, ಭದ್ರತಾ ಏಜೆನ್ಸಿಗಳು ಮತ್ತು ಎಲ್ಲಾ ಸಶಸ್ತ್ರ ಹೋರಾಟಗಾರರ ಗುಂಪುಗಳನ್ನು ವಿಸರ್ಜಿಸಿ ನಾಗರಿಕರ ಭದ್ರತೆಗಾಗಿ ಹೊಸ ಭದ್ರತಾ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಸಿರಿಯಾವನ್ನು ಹಲವು ದಶಕಗಳ ಕಾಲ ಆಳಿದ ಅಸ್ಸಾದ್ ಅವರ `ಬಾಥ್’ ಪಕ್ಷವನ್ನೂ ವಿಸರ್ಜಿಸಲಾಗಿದೆ ಎಂದು ಸನಾ ವರದಿ ಮಾಡಿದೆ.

Leave A Reply

Your email address will not be published.