EBM News Kannada
Leading News Portal in Kannada

ಕೇರಳ | ಇಟಲಿಗೆ ಹೋಗಲು ಸಿದ್ಧಳಾಗಿದ್ದ ಮಹಿಳೆಯನ್ನು ಸುಳ್ಳು ಡ್ರಗ್ಸ್ ಕೇಸ್ ನಲ್ಲಿ ಜೈಲಿಗಟ್ಟಿದರು!

0


ಕೊಚ್ಚಿ: “ಸುಳ್ಳು ಆರೋಪಗಳು ಜೀವನಗಳನ್ನು ಹಾಳು ಮಾಡಬಹುದು. ಸುಳ್ಳು ಆರೋಪ ಮಾಡುವವರನ್ನು ಅವುಗಳನ್ನು ಮಾಡುವವರನ್ನು ಅದಕ್ಕೆ ಹೊಣೆಗಾರರನ್ನಾಗಿ ಮಾಡಬೇಕು” ಇದು ಕೇರಳ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಪಿ.ವಿ.ಕುಂಞಿಕೃಷ್ಣನ್ ಅವರು ಸೋಮವಾರ ತೀರ್ಪು ಪ್ರಕಟಿಸುವ ಮುನ್ನ ನೀಡಿದ ಹೇಳಿಕೆ.

ನ್ಯಾಯಾಲಯವು ತ್ರಿಶೂರು ಜಿಲ್ಲೆಯ ಚಾಲಕುಡಿಯ ಬ್ಯೂಟಿ ಪಾರ್ಲರ್‌ನ ಒಡತಿ ಶೀಲಾ ಸನ್ನಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದ ಎರ್ನಾಕುಲಂ ನಿವಾಸಿ ನಾರಾಯಣ ದಾಸ್ (54) ಎಂಬಾತ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಫೆಬ್ರವರಿ 2023ರಲ್ಲಿ ದಾಸ್ ನೀಡಿದ್ದ ಮಾಹಿತಿಯ ಮೇರೆಗೆ ರಾಜ್ಯ ಅಬಕಾರಿ ಇಲಾಖೆಯ ಅಧಿಕಾರಿಗಳು ಶೀಲಾ ಅವರ ಪಾರ್ಲರ್ ಮೇಲೆ ದಾಳಿ ನಡೆಸಿ ಎಲ್‌ಎಸ್‌ಡಿ ಸ್ಟ್ಯಾಂಪ್‌ಗಳನ್ನು ಹೊಂದಿದ್ದ ಆರೋಪದಲ್ಲಿ ಅವರ ವಿರುದ್ಧ ಮಾದಕ ದ್ರವ್ಯಗಳ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ದಾಸ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೋಮವಾರ ವಜಾಗೊಳಿಸಿದ ನ್ಯಾ.ಕುಂಞಿಕೃಷ್ಣನ್, ಇಂತಹ ಪ್ರಕರಣಗಳಲ್ಲಿ ಆರೋಪಿಗಳನ್ನು ತನಿಖೆಗಾಗಿ ತಕ್ಷಣ ಬಂಧಿಸಬೇಕು. ವಿಚಾರಣೆಯ ಬಳಿಕ ತಪ್ಪಿತಸ್ಥ ಎಂದು ಕಂಡುಬಂದರೆ ನಿಗದಿತ ಶಿಕ್ಷೆಯ ಜೊತೆಗೆ ಸಂತ್ರಸ್ತರಿಗೆ ಕಾನೂನು ಪ್ರಕಾರ ಸಾಧ್ಯವಿರುವ ಗರಿಷ್ಠ ಪರಿಹಾರವನ್ನು ಪಾವತಿಸುವಂತೆ ಆದೇಶಿಸಬೇಕು. ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಬಲಪಡಿಸಲು ಇಂತಹ ಸ್ಪಷ್ಟ ಸಂದೇಶವನ್ನು ಸಮಾಜಕ್ಕೆ ರವಾನಿಸುವ ಅಗತ್ಯವಿದೆ ಎಂದು ಹೇಳಿದರು. ಸುಳ್ಳು ಆರೋಪಗಳನ್ನು ಮಾಡುವವರಿಗೆ ಕಠಿಣ ಶಿಕ್ಷೆಯನ್ನು ನೀಡುವಂತಾಗಲು ಕಾನೂನಿಗೆ ತಿದ್ದುಪಡಿ ತರುವಂತೆಯೂ ನ್ಯಾಯಾಲಯವು ಕೇಂದ್ರ ಸರಕಾರವನ್ನು ಆಗ್ರಹಿಸಿತು.

2023, ಫೆ.27ರಂದು ಅಬಕಾರಿ ಅಧಿಕಾರಿಗಳು ಶೀಲಾ ಅವರ ಪಾರ್ಲರ್ ಮೇಲೆ ದಾಳಿ ನಡೆಸಿದ ಬಳಿಕ ಅವರ ಬದುಕೇ ಬದಲಾಗಿಬಿಟ್ಟಿತ್ತು. ಶೀಲಾ ಅವರ ಬ್ಯಾಗ್ ಮತ್ತು ಸ್ಕೂಟರ್‌ ಜಾಲಾಡಿದ ಅಧಿಕಾರಿಗಳು ಕಾಗದದಂತಹ ವಸ್ತುವನ್ನು ಹೊರತೆಗೆದು, ಇದು ಎಲ್‌ಎಸ್‌ಡಿ ಸ್ಟಾಂಪ್ ಎಂದು ಹೇಳಿದ್ದರು. ಈ ಸ್ಟ್ಯಾಂಪ್ ಎಂದರೆ ಏನು ಎನ್ನುವುದೇ ಶೀಲಾರಿಗೆ ತಿಳಿದಿರಲಿಲ್ಲ.

ತನ್ನದಲ್ಲದ ತಪ್ಪಿಗೆ ಶೀಲಾ ಬರೋಬ್ಬರಿ 72 ದಿನಗಳನ್ನು ಜೈಲಿನಲ್ಲಿ ಕಳೆದಿದ್ದರು. ಮೇ 2023ರಲ್ಲಿ ನಡೆಸಲಾದ ರಾಸಾಯನಿಕ ಪರೀಕ್ಷೆಯು ಶೀಲಾ ಅವರಿಂದ ವಶಪಡಿಸಿಕೊಳ್ಳಲಾದ ವಸ್ತು ಎಲ್‌ಎಸ್‌ಡಿಯನ್ನು ಒಳಗೊಂಡಿರಲಿಲ್ಲ ಎನ್ನುವುದನ್ನು ಬಹಿರಂಗಗೊಳಿಸಿತ್ತು. ಆದರೆ ಆ ವೇಳೆಗೆ ಶೀಲಾ ಎಲ್ಲವನ್ನೂ ಕಳೆದುಕೊಂಡಿದ್ದರು.

ತನ್ನ ಬಂಧನದ ಸಂದರ್ಭದಲ್ಲಿ ಶೀಲಾ ಹೋಮ್ ನರ್ಸ್ ಆಗಿ ಕೆಲಸ ಮಾಡಲು ಇಟಲಿಗೆ ವಲಸೆ ಹೋಗಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಮೂರು ತಿಂಗಳ ಹಿಂದೆ ಚೆನ್ನೈಗೆ ತೆರಳಿರುವ ಅವರು ಈಗ ಅಲ್ಲಿಯ ಡೇ ಕೇರ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ದಾಸ್, ಶೀಲಾ ಅವರ ಬಂಧನಕ್ಕೆ ಕಾರಣವಾಗಿದ್ದ ಸುಳ್ಳು ಮಾಹಿತಿಯನ್ನು ನೀಡಿದ್ದ ಎನ್ನುವುದು ಅಬಕಾರಿ ಅಪರಾಧ ವಿಭಾಗವು ನಡೆಸಿದ ತನಿಖೆಯಲ್ಲಿ ಬಯಲಾಗಿತ್ತು. ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆತ ಶೀಲಾರ ಸೊಸೆಯ ಸಹೋದರಿಯ ಆತ್ಮೀಯ ಸ್ನೇಹಿತನಾಗಿದ್ದ ಎನ್ನುವುದನ್ನೂ ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದರು.

‘ಘಟನೆಗೆ ಒಂದು ದಿನ ಮೊದಲು ನನ್ನ ಸೊಸೆಯ ಸಹೋದರಿ ನಮ್ಮ ಮನೆಯಲ್ಲಿದ್ದಳು. ಆಕೆ ನನ್ನ ಸ್ಕೂಟರ್‌ನ್ನೂ ಬಳಸಿದ್ದಳು. ಆಕೆಯ ನಡತೆಗಳು ನಮಗೆ ಒಂದಿಷ್ಟು ಅನುಮಾನಗಳನ್ನು ಹುಟ್ಟಿಸಿದ್ದವು. ಆ ಬಳಿಕ ನಾವು ಆಕೆಯನ್ನು ಮತ್ತು ನನ್ನ ಸೊಸೆಯನ್ನು ಅನುಮಾನಿಸಿದ್ದೆವು’ ಎಂದು ನೆನಪಿಸಿಕೊಂಡ ಶೀಲಾ ,ತನಗೆ ಇತರ ಯಾವುದೇ ಶತ್ರುಗಳಿರಲಿಲ್ಲ ಎಂದರು.

ತನ್ನ ಮತ್ತು ತನ್ನ ಸೊಸೆಯ ನಡುವೆ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ. ಹೀಗಿದ್ದರೂ ಇದು ಸಂಭವಿಸಿದ್ದು ಹೇಗೆ ಎನ್ನುವುದು ತನ್ನನ್ನು ಗೊಂದಲದಲ್ಲಿ ಸಿಲುಕಿಸಿದೆ ಎಂದು ಶೀಲಾ ಹೇಳಿದರು.

ಏಳು ದಿನಗಳಲ್ಲಿ ಪೋಲಿಸರಿಗೆ ಶರಣಾಗುವಂತೆ ದಾಸ್‌ಗೆ ಆದೇಶಿಸಿರುವ ಉಚ್ಛ ನ್ಯಾಯಾಲಯವು, ಇದಕ್ಕೆ ತಪ್ಪಿದರೆ ಆತನನ್ನು ಬಂಧಿಸುವಂತೆ ತನಿಖಾಧಿಕಾರಿಗೆ ಸೂಚಿಸಿದೆ.

ಉಚ್ಛ ನ್ಯಾಯಾಲಯದ ತೀರ್ಪು ಶೀಲಾಗೆ ನೆಮ್ಮದಿಯನ್ನು ಒದಗಿಸಿದೆಯಾದರೂ ಈಗಾಗಲೇ ಎಲ್ಲವನ್ನೂ ಕಳೆದುಕೊಂಡಿರುವ ಅವರು ನಿಟ್ಟುಸಿರುವ ಬಿಡುವ ಸ್ಥಿತಿಯಲ್ಲಿ ಈಗ ಇಲ್ಲ

ಕೃಪೆ: thenewsminute.com

Leave A Reply

Your email address will not be published.