ವಾಷಿಂಗ್ಟನ್: ಅಮೆರಿಕನ್ ಏರ್ ಲೈನ್ಸ್ ವಿಮಾನ ಹೆಲಿಕಾಪ್ಟರ್ ಗೆ ಢಿಕ್ಕಿಯಾಗಿ ಪತನಗೊಂಡ ಬಳಿಕ ಪೊಟೊಮ್ಯಾಕ್ ನದಿಯಿಂದ 18 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಯುಎಸ್ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.
ಅಮೆರಿಕದ ಶ್ವೇತಭವನದಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ರೊನಾಲ್ಡ್ ರೇಗನ್ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಮೆರಿಕನ್ ಏರ್ ಲೈನ್ಸ್ ವಿಮಾನ ಆಗಸದಲ್ಲೇ ಹೆಲಿಕಾಪ್ಟರ್ ಗೆ ಢಿಕ್ಕಿ ಹೊಡೆದು ಪೊಟೊಮ್ಯಾಕ್ ನದಿಗೆ ಬಿದ್ದಿತ್ತು. ಘಟನೆ ಬಳಿಕ ಪೊಟೊಮ್ಯಾಕ್ ನದಿಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ವಿಮಾನ ಮತ್ತು ಹೆಲಿಕಾಪ್ಟರ್ ಆಗಸದಲ್ಲಿ ಢಿಕ್ಕಿಯಾಗಿ ನದಿಗೆ ಅಪ್ಪಳಿಸುತ್ತಿರುವುದು ವೀಡಿಯೊದಲ್ಲಿ ಕಂಡು ಬಂದಿದೆ. ಅಮೆರಿಕನ್ ಈಗಲ್ ಫ್ಲೈಟ್ 5342 60 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಗಳೊಂದಿಗೆ ಕಾನ್ಸಾಸ್ ನಿಂದ ವಾಷಿಂಗ್ಟನ್ ಡಿಸಿಗೆ ತೆರಳುತ್ತಿತ್ತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಹೆಲಿಕಾಪ್ಟರ್ ತರಬೇತಿಯ ಭಾಗವಾಗಿ ಹಾರಾಟ ನಡೆಸುತ್ತಿತ್ತು ಮತ್ತು ಅದರಲ್ಲಿ ಮೂವರು ಸೈನಿಕರಿದ್ದರು ಎಂದು ವರದಿಯು ತಿಳಿಸಿದೆ.