ಟೊರಂಟೊ : ಏರಿಂಡಿಯಾ ವಿಮಾನದಲ್ಲಿ ಬಾಂಬ್ ಇರಿಸಿದ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ರಿಪುದಮನ್ ಸಿಂಗ್ ಮಲಿಕ್ ಹತ್ಯೆ ಆರೋಪಿ ಟ್ಯಾನರ್ ಫಾಕ್ಸ್‍ಗೆ ಕೆನಡಾದ ಬ್ರಿಟಿಷ್ ಕೊಲಂಬಿಯಾ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
24 ವರ್ಷದ ಟ್ಯಾನರ್ `ಸೆಕೆಂಡ್ ಡಿಗ್ರಿ ಮರ್ಡರ್'(ಉದ್ದೇಶಪೂರ್ವಕ ಹತ್ಯೆ, ಆದರೆ ಪೂರ್ವನಿಯೋಜಿತ ಕೃತ್ಯವಲ್ಲ) ಅಪರಾಧ ಎಸಗಿರುವುದು ಸಾಬೀತಾಗಿರುವುದರಿಂದ ಪೆರೋಲ್‍ಗೆ ಅವಕಾಶವಿಲ್ಲದೆ 20 ವರ್ಷ ಜೈಲುಶಿಕ್ಷೆ ವಿಧಿಸಿರುವುದಾಗಿ ನ್ಯಾಯಾಧೀಶರು ಘೋಷಿಸಿದ್ದಾರೆ. ಅಪರಾಧದಲ್ಲಿ ನಾನು ನಿರ್ವಹಿಸಿದ ಪಾತ್ರಕ್ಕಾಗಿ ನನ್ನನ್ನು ಕ್ಷಮಿಸಿ’ ಎಂದು ಟ್ಯಾನರ್ ಹೇಳಿದ, ಆದರೆ ಯಾರ ಸೂಚನೆ ಮೇರೆಗೆ ಹತ್ಯೆ ನಡೆಸಿದ್ದು ಎಂದು ಬಾಯಿ ಬಿಡಲಿಲ್ಲ ಎಂದು ವರದಿಯಾಗಿದೆ. ಸಹ ಆರೋಪಿ ಜೋಸ್ ಲೊಪೆಝ್‍ನ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಘೋಷಿಸಿಲ್ಲ.
1985ರ ಜೂನ್ 23ರಂದು ಏರಿಂಡಿಯಾದ ಕನಿಷ್ಕ ವಿಮಾನದಲ್ಲಿ ಬಾಂಬ್ ಸ್ಫೋಟಗೊಂಡು 329 ಜನರು ಸಾವನ್ನಪ್ಪಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಲಿಕ್‍ನನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಡುಗಡೆಗೊಳಿಸಲಾಗಿತ್ತು.
2022ರ ಆರಂಭದಲ್ಲಿ ಮಲಿಕ್ ಖಾಲಿಸ್ತಾನ್ ಚಳವಳಿಯನ್ನು ನಿರಾಕರಿಸುವ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳುವ ಸಾರ್ವಜನಿಕ ಪತ್ರವನ್ನು ಬಿಡುಗಡೆಗೊಳಿಸಿದ್ದನು. ಅಲ್ಲದೆ ಖಾಲಿಸ್ತಾನ್ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ ಜತೆ ಭಿನ್ನಾಭಿಪ್ರಾಯ ಹೊಂದಿದ್ದ ಮಲಿಕ್‍ನನ್ನು ಭಾರತ ಕಪ್ಪುಪಟ್ಟಿಯಿಂದ ಹೊರಗಿರಿಸಿದ ಬಳಿಕ 2022ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದನು. 2022ರ ಜುಲೈ 14ರಂದು ಕೆನಡಾದ ಸರ್ರೆಯಲ್ಲಿರುವ ತನ್ನ ಸಂಸ್ಥೆಯ ಪಾಕಿರ್ಂಗ್ ಏರಿಯಾದಲ್ಲಿ ಕಾರಿನಲ್ಲಿ ಕುಳಿತಿದ್ದ ಮಲಿಕ್ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು..